
ಆನೇಕಲ್, ಅ. ೧೬: ನೃತ್ಯವು ಕೇವಲ ಮನರಂಜನೆಯ ಸಾಧನವಲ್ಲ, ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಾಗಿದೆ ಎಂದು ಕೊಳ್ಳೆಗಾಲ ಕ್ಷೇತ್ರದ ಮಾಜಿ ಶಾಸಕ ಬಾಲರಾಜ್ ತಿಳಿಸಿದರು. ಪಂಡಿತ ಅಗ್ರಹಾರದ ಗ್ರಾಮದಲ್ಲಿ ಗುರುದೀಪ ಸಂಗೀತ ಮತ್ತು ರೂಪ ರವರ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡ ನವ ಎಕ್ಸ್ ಪ್ರೆಶನ್ ಡ್ಯಾನ್ಸ್ ಅಕಾಡೆಮಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಮೃತ ಕಲಾ ಉತ್ಸವ ಕಲಾ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಹಾಗೂ ಯುವ ಜನರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಜೆಡಿಎಸ್ ಯುವ ನಾಯಕರಾದ ಪಟಾಪಟ್ ರವೀಂದ್ರ ಮಾತನಾಡಿ,ನೃತ್ಯ ಹಾಗೂ ಸಾಂಸ್ಕೃತಿಕ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನವ ಎಕ್ಸ್ ಪ್ರೆಶನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಅಮೃತ ಕಲಾ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ನವ ಎಕ್ಸ್ ಪ್ರೆಶನ್ ಡ್ಯಾನ್ಸ್ ಅಕಾಡೆಮಿಯ ಈ ಪ್ರಯತ್ನವು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದರ ಜೊತೆಗೆ, ಭಾರತೀಯ ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೃತ್ಯ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ಗಣ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಮುಖಂಡರಾದ ಅತ್ತಿಬೆಲೆ ಬಿ.ಕೆ. ಬಷೀರ್, ಅತ್ತಿಬೆಲೆ ಪ್ಯಾಮುಲಿ ಬಿಗ್ ಮಾರ್ಟ್ನ ಮುಖ್ಯಸ್ಥರಾದ ಇಷ್ರಾದ್, ಅತ್ತಿಬೆಲೆ ವೆಂಕಟೇಶ, ನವ ಎಕ್ಸ್ ಪ್ರೆಶನ್ ಡ್ಯಾನ್ಸ್ ಅಕಾಡೆಮಿಯ ಗುರುದೀಪ ಸಂಗೀತ, ಕ್ರಿಶ್ ಸಂಗೀತ, ಗ್ರೀರೀಶ್ಮಾ, ಅಭಿರಾಮಿ ಮೊದಲಾದವರು ಭಾಗವಹಿಸಿದ್ದರು.























