
ಸಂಜೆವಾಣಿ ವಾರ್ತೆ
ಚಾಮರಾಜನಗರ. ಅ.15- ಖಾಸಗಿ ಫೈನಾನ್ಸ್ ಇಕ್ವಾಟೇಸ್ ಬ್ಯಾಂಕ್ನಿಂದ ರೈತರಿಗೆ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಖಾಸಗಿ ಫೈನಾನ್ಸ್ ಮುಂಭಾಗ ಜಮಾಯಿಸಿದ ರೈತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಚಾರ ತಿಳಿದು ಕಚೇರಿಗೆ ಯಾವುದೇ ಸಿಬ್ಬಂದಿ ಹಾಜರಾಗಿರಲಿಲ್ಲ. ಶಾಖೆಯ ಮಾನೇಜರ್ ಹೊರತು ಪಡಿಸಿ ಸಿಬ್ಬಂದಿ ಇರಲಿಲ್ಲ. ಕೆಲ ಕಾಲ ಧರಣಿ ನಡೆಸಿ, ಸ್ಥಳಕೆ ಪ್ರಾದೇಶಿಕ ಅಧಿಕಾರಿಯನ್ನು ಕರೆಸಬೇಕೆಂಬು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆಯೆ ಪ್ರತಿಭಟನೆ ಮಾಡೋಣ. ಅವರೇ ಈ ಅಧಿಕಾರಿಯನ್ನು ಕರೆಸುತ್ತಾರೆ ಎಂದು ಎಚ್ಚರಿಕೆ ಕೊಟ್ಟು ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟರು.
ಅಲ್ಲಿಂದ ಮೆರವಣಿಗೆಯಲ್ಲಿ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ಕುಳಿತರು.
ತಾಲೂಕಿನ ಕಲ್ಲುರ ಗ್ರಾಮದ ಮಂಗಳಮ್ಮ ಎಂಬುವವರು ಫೈನಾನ್ಸ್ ಕಂಪನಿಯಿಂದ ಸಾಲ ಪಡೆದುಕೊಂಡಿದ್ದು, ಕೋರೋನಾ ಬರುವವರೆಗೆ ಸಕಾಲದಲ್ಲಿ ಕಂತುಗಳ ಮೂಲಕ ಸಾಲ ಪಾವತಿ ಮಾಡಿದ್ದಾರೆ. ಕೊರೋನಾ ಕಾರಣದಿಂದ ಯಾವುದೇ ಅದಾಯ ಇಲ್ಲದೇ ದುಡಿಮೆ ಕಷ್ಟವಾಗಿ 13 ಕಂತನ್ನು ಉಳಿಸಿಕೊಂಡಿದ್ದರು. ಅವರಿಗೆ ಕಳೆದ ಮೂರು ವರ್ಷಗಳಿಂದ ಹೆಚ್ಚುವರಿಯಾಗಿ ಸಾಲವನ್ನು ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಅದರ ಆಸಲು ಮಾತ್ರ ಪಾವತಿಸಲು ಸಿದ್ಧವಿದ್ದೇವೆ. ಹೆಚ್ಚುವರಿ ಹಣವನ್ನು ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ ಎಂದರು. ಬ್ಯಾಂಕಿನವರು ಪದೇ ಪದೇ ಕಿರುಕುಳ ನೀಡುತ್ತಿದ್ದು, ಇವರ ವಿರುದ್ದ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಇದೇ ರೀತಿ ಜಿಲ್ಲೆಯ ಹಲವು ರೈತರು ಹಾಗೂ ಬಡವರಿಗೆ ಅನ್ಯಾಯವಾಗುತ್ತಿದ್ದಂತೆ ನಬಾರ್ಡ್ ಕಾಯಿದೆಯನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಬಡ್ಡಿಯನ್ನು ಹಾಕಲಾಗುತ್ತಿದೆ. ಜೊತೆಗೆ ಹೆಚ್ಚುವರಿ ಹಣ ಬಾಕಿ ಇದ್ದರೆ ಸಾಲಗಾರರ ಅನುಮತಿಯನ್ನು ಪಡೆಯದೇ ಹೆಚ್ಚುವರಿ ಹಣವನ್ನು ಹಾಕಿ ಸಾಲ ಹೆಚ್ಚಳ ಮಾಡುಲಾಗುತ್ತದೆ. ಇದರಿಂದ ಸಾಲ ಪಡೆದುಕೊಂಡ ರೈತರು ಸಾಲ ಕಟ್ಟಲು ಸಾಧ್ಯವಾಗದೆ ಅತ್ಮಹತ್ಯೆ ಮಾಡಿಕೊಳ್ಳುವಂತಹ ಹಂತಕ್ಕೆ ಬಂದಿದ್ದಾರೆ. ಇವರ ಕಿರುಕುಳ ನೀಲ್ಲಬೇಕು. ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಇಕ್ವಾರ್ಟೆಸ್ ಸೇರಿದಂತೆ ಅನೇಕ ಖಾಸಗಿ ಪೈನಾನ್ಸ್ ಕಂಪನಿಗಳು ರೈತರನ್ನು ಸುಲಿಗೆ ಮಾಡುತ್ತಿದ್ದು, ಇವರ ವಿರುದ್ದ ಜಿಲ್ಲಾಡಳಿತ ಉಗ್ರ ಕ್ರಮ ಕೈಗೊಳ್ಳಬೇಕು. ಇಂಥ ಪೈನಾನ್ಸ್ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯ ಬಂದಿಗೌಡನಹಳ್ಳಿ ನಟರಾಜು, ಉಪಾಧ್ಯಕ್ಷ ಸುರೇಂದ್ರ, ತಾಲೂಕು ಅಧ್ಯಕ್ಷೀಯ ಮಂಡಳಿಯ ಮಹೇಶ್, ಮಂಜು ಕೊತ್ತಲವಾಡಿ, ಕಾರ್ಯದರ್ಶಿ ಮಲ್ಲೇಶ್, ಶಂಕರ್, ಪೃಥ್ವಿ, ಪ್ರಸಾದ್ ವಡ್ಡರಹಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.


























