Home ಜಿಲ್ಲೆ ಬೆಂಗಳೂರು ರಾಜಗೋಪುರದ ಮಹಾದ್ವಾರಕ್ಕೆ ವಾಸ್ತು ಪೂಜೆ

ರಾಜಗೋಪುರದ ಮಹಾದ್ವಾರಕ್ಕೆ ವಾಸ್ತು ಪೂಜೆ

ಬೇತಮಂಗಲ,ಅ.೧೬:ಶ್ರೀ ವಿಜಯೇಂದ್ರ ಸ್ವಾಮಿ ದೇವಾಲಯದ ರಾಜಗೋಪುರದ ಮಹಾದ್ವಾರ ನಿರ್ಮಾಣಕ್ಕೆ ಶಾಸ್ತ್ರೋಕ್ತವಾಗಿ ವಾಸ್ತು ಪೂಜಾ ಹಾಗೂ ಹೋಮ ಹವನ ನೆರವೇರಿಸಲಾಯಿತು.


ಪಾಲಾರ್ ನದಿಯ ದಡದಲ್ಲಿ ನೆಲೆಸಿರುವ ಶ್ರೀ ವಿಜಯೇಂದ್ರ ಸ್ವಾಮಿ ದೇವಾಲಯದ ಶುಭಾರಂಭದಲ್ಲಿ ಪ್ರಧಾನ ಆರ್ಚಕ ಸುದರ್ಶನ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.


ದೇವಾಲಯದ ರಾಜಗೋಪುರ ಮತ್ತು ಮಹಾದ್ವಾರವು ದೇವಾಲಯದ ಪ್ರವೇಶದ್ವಾರ ಮಾತ್ರವಲ್ಲದೆ, ಅದರ ವಾಸ್ತುಶಿಲ್ಪ ಹಾಗೂ ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಭಾಗಗಳಾಗಿವೆ. ಇವುಗಳ ನಿರ್ಮಾಣ ಮತ್ತು ಅಭಿವೃದ್ಧಿಯ ಕಾರ್ಯಗಳು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಪರಿಚಯಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ದೇಗುಲದ ಕನ್ವೀನರ್ ಅ.ಮು ಲಕ್ಷ್ಮಿ ನಾರಾಯಣ್ ಹೇಳಿದರು.


ದೇವಾಲಯದ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಆಡಳಿತ ಮಂಡಳಿ, ಅರ್ಚಕರು, ಭಕ್ತರು ಹಾಗೂ ಸ್ಥಳೀಯ ಸಾರ್ವಜನಿಕರ ಸಹಕಾರ ಅಗತ್ಯ. ಧಾರ್ಮಿಕ ಕ್ಷೇತ್ರಗಳ ಪಾವಿತ್ರತೆ ಕಾಪಾಡುವುದರ ಜೊತೆಗೆ ಸ್ವಚ್ಛತೆ, ಶಿಸ್ತು ಮತ್ತು ಸಾಮರಸ್ಯಕ್ಕೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.


ಪೂಜೆಯಲ್ಲಿ ಹಿರಿಯ ಮುಖಂಡರಾದ ಶಾಂತ ಮೂರ್ತಿ, ಶ್ರೀಹರೀ, ರಾಮಚಂದ್ರಪ್ಪ, ಅಶ್ವಥ್ ನಾರಾಯಣ್, ಮುನೇಗೌಡ, ಪ್ರಭಾಕರ್, ಮಲ್ಲಿಕಾರ್ಜುನ್, ರಾಜಣ್ಣ, ವಿಜಯೇಂದ್ರ, ಮುನಿಸ್ವಾಮಿ, ಗೋಪಾಲಪ್ಪ, ಶ್ರೀನಿವಾಸ್, ಕೃಷ್ಣ ಮೂರ್ತಿ, ಕೃಷ್ಣಪ್ಪ, ಸುರೇಶ್, ಗಂಗೂಲಪ್ಪ ಸೇರಿದಂತೆ ಮುಖಂಡರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.