
ಬೊಗೋಟಾ (ಕೊಲಂಬಿಯಾ),ಆ.9- ದಕ್ಷಿಣ ಅಮೆರಿಕ ದೇಶ ಕೊಲಂಬಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ ಸಂಭವಿಸಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ದೇಶದ ನೂತನ ಅಧ್ಯಕ್ಷರಾಗಿ ಕನ್ಸರ್ವೇಟಿವ್ ಪಕ್ಷದ ಅಬೆಲಾರ್ಡೊ ಡಿ ಲಾ ಎಸ್ಪ್ರಿಲ್ಲಾ ಅಧಿಕಾರ ವಹಿಸಿಕೊಂಡ ಮರುದಿನವೇ ಈ ದಾಳಿ ನಡೆದಿದೆ.
ನೈಋತ್ಯ ಕೊಲಂಬಿಯಾದ ಪ್ರಮುಖ ಪ್ಯಾನ್-ಅಮೆರಿಕನ್ ಹೆದ್ದಾರಿಯ ಟೋಲ್ ಪ್ಲಾಜಾ ಬಳಿ ಈ ಧಮಾಕ ಸಂಭವಿಸಿದೆ. ಮೋಟಾರ್‍ಸೈಕಲ್‍ನಲ್ಲಿ ಬಂದ ವ್ಯಕ್ತಿಯೊಬ್ಬ ವಾಹನವನ್ನು ಟೋಲ್ ಪ್ಲಾಜಾ ಬಳಿ ಬಿಟ್ಟು ಪರಾರಿಯಾಗಿದ್ದ, ತಕ್ಷಣವೇ ಅದು ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತು ಎಂದು ಗಾಯಗೊಂಡ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಸ್ಫೋಟದ ರಭಸಕ್ಕೆ ಸಮೀಪದ ಮನೆಗಳ ಕಿಟಕಿಗಳು ಚೂರಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಈ ದಾಳಿಯ ಹಿಂದೆ ರದ್ದಾಗಿರುವ ‘ಫಾರ್ಕ್’ ಗೆರಿಲ್ಲಾ ಸಂಘಟನೆಯ ವಿಫಲ ಬಂಡಾಯ ಗುಂಪುಗಳ ಕೈವಾಡವಿದೆ ಎಂದು ಕೊಲಂಬಿಯಾ ಸೇನೆ ಶಂಕಿಸಿದೆ.
ಘಟನೆಯನ್ನು ಉಗ್ರವಾಗಿ ಖಂಡಿಸಿರುವ ನೂತನ ಅಧ್ಯಕ್ಷ ಅಬೆಲಾರ್ಡೊ, “ಸಶಸ್ತ್ರ ಗುಂಪುಗಳಿಗೆ ಎರಡೇ ಮಾರ್ಗಗಳಿವೆ: ಕಾನೂನಿಗೆ ಶರಣಾಗುವುದು ಅಥವಾ ಭದ್ರತಾ ಪಡೆಗಳ ಎದುರೇಟು ಎದುರಿಸುವುದು” ಎಂದು ಎಚ್ಚರಿಸಿದ್ದಾರೆ. ಜೊತೆಗೆ, ಕಾರಾಗೃಹಗಳಿಂದ ಅಪರಾಧ ಚಟುವಟಿಕೆಗಳು ನಡೆಯುವುದನ್ನು ತಡೆಯಲು 117 ಪ್ರಮುಖ ಕೈದಿಗಳನ್ನು ಅತಿಸುರಕ್ಷಿತ ಜೈಲುಗಳಿಗೆ ಸ್ಥಳಾಂತರಿಸಲು ಆದೇಶಿಸಿದ್ದಾರೆ.































