Home ಜಿಲ್ಲೆ ಮೈಸೂರು ಕಾವೇರಿ ಆರತಿ, ಶ್ರೀರಂಗಪಟ್ಟಣ ದಸರಾ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಳ್ಳಿ

ಕಾವೇರಿ ಆರತಿ, ಶ್ರೀರಂಗಪಟ್ಟಣ ದಸರಾ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಳ್ಳಿ

ಸಂಜೆವಾಣಿ ವಾರ್ತೆ
ಮಂಡ್ಯ:ಅ.2:-
ಅಕ್ಟೋಬರ್ 11ರಂದು ಶ್ರೀರಂಗಪಟ್ಟಣ ದಲ್ಲಿ ನಡೆಯಲಿರುವ ಕಾವೇರಿ ಆರತಿ ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧಿಕಾರಿ ಗಳಿಗೆ ಸೂಚಿಸಿದರು.


ಶ್ರೀರಂಗಪಟ್ಟಣ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಿಡಿಒಗಳೊಂದಿಗೆ ಚರ್ಚಿಸಿ, ಆಯಾ ಗ್ರಾಮಗಳಲ್ಲಿ ನಡೆಯುವ ಹಬ್ಬಗಳು ಹಾಗೂ ಇತರ ಕಾರ್ಯಕ್ರಮ ಗಳ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರು ಕಾವೇರಿ ಆರತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಕಾರ್ಯ ಕ್ರಮದ ಕುರಿತು ಸಾರ್ವಜ ನಿಕರಿಗೆ ವ್ಯಾಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಸಾರ್ವಜನಿಕರನ್ನು ಕಾರ್ಯ ಕ್ರಮಕ್ಕೆ ಕರೆತರಲು ಸುಮಾರು 300 ಖಾಸಗಿ ಬಸ್‍ಗಳ ವ್ಯವಸ್ಥೆ ಮಾಡ ಲಾಗುವುದು.ಆಯಾ ಗ್ರಾಮ ಪಂಚಾಯಿತಿಗಳಿಗೆ ಬಸ್‍ಗಳನ್ನು ಕಳುಹಿಸಿ, ಸಾರ್ವಜನಿಕರು ಸುರಕ್ಷಿತ ವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಮರಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಕಾವೇರಿ ಆರತಿ ಜಿಲ್ಲೆಯ ಜನರ ಭಾವನೆ, ನಂಬಿಕೆ ಹಾಗೂ ಸಾಂಸ್ಕೃತಿಕ ಪರಂಪರೆಯೊಂದಿಗೆ ನಿಕಟವಾಗಿ ಬೆಸೆದು ಕೊಂಡಿ ರುವ ಮಹತ್ವದ ಕಾರ್ಯ ಕ್ರಮವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜ ನಿಕರು ಪಾಲ್ಗೊಳ್ಳುವಂತೆ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.
ಶುದ್ಧ ಕುಡಿಯುವ ನೀರು, ಊಟದ ವ್ಯವಸ್ಥೆಗೆ ಆದ್ಯತೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜ ನಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಸಂಬಂಧ ಪಟ್ಟ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮೂಲಸೌಕರ್ಯ, ಸ್ವಚ್ಛತೆ ಹಾಗೂ ಇತರ ಅಗತ್ಯ ವ್ಯವಸ್ಥೆಗಳಿಗೆ ಆದ್ಯತೆ ನೀಡ ಬೇಕು ಎಂದು ಸೂಚಿಸಿದರು.
ಸಾರ್ವಜನಿಕರ ಅನುಕೂಲ ಕ್ಕಾಗಿ ಡಬಲ್ ಡೋರ್ ಹೊಂದಿರುವ 20 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಒದಗಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


ಅ.12 ಮತ್ತು 13ರಂದು ಯುವ ಸಂಭ್ರಮ
ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಯುವಕರಿಗಾಗಿ ಅಕ್ಟೋಬರ್ 12 ಮತ್ತು 13ರಂದು ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ `ಯುವ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 12ರಂದು ನಡೆಯುವ ಉದ್ಘಾಟನಾ ದಿನದ ಕಾರ್ಯಕ್ರಮದಲ್ಲಿ ಸುಮಾರು 60 ಕಲಾ ತಂಡ ಗಳು ವಿವಿಧ ಸಾಂಸ್ಕೃತಿಕ ಹಾಗೂ ನೃತ್ಯ ಪ್ರದರ್ಶನ ಗಳನ್ನು ನೀಡಲಿವೆ.ಯುವ ಪ್ರತಿಭೆಗಳಿಗೆ ತಮ್ಮ ಕಲಾ ಸಾಮಥ್ರ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶ ದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾ ತಂಡಗಳ ಸದಸ್ಯರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸ ಲಾಗುವುದು. ಕುಡಿಯುವ ನೀರು, ಊಟ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡ ಲಾಗಿದ್ದು,ಯಾವುದೇ ಅನಾನುಕೂಲ ಉಂಟಾಗ ದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಸಭೆಯಲ್ಲಿ ಮಂಡ್ಯ ಉಪವಿಭಾಗಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ. ಲಕ್ಷ್ಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.