
ಮಂಗಳೂರು: ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು, ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಬೆಳವಣಿಗೆಗಳು ಮತ್ತು ಮುಂದಿನ ಹೆಜ್ಜೆಯ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರಸ್ತುತ ಚರ್ಚೆಯಾಗುತ್ತಿರುವ ಎಲ್ಲವೂ ಕೇವಲ ಊಹಾಪೋಹಗಳಷ್ಟೇ, ಯಾವುದೂ ಅಂತಿಮಗೊಂಡಿಲ್ಲ. ನಿರ್ಧಾರವಾದ ಮೇಲೆ ಮಾಧ್ಯಮಗಳ ಮುಂದೆಯೇ ಅಧಿಕೃತವಾಗಿ ಹೇಳುತ್ತೇನೆ” ಎಂದರು.
ಕಾಂಗ್ರೆಸ್ ಆಹ್ವಾನ ಹಾಗೂ ಸ್ವತಂತ್ರ ಸ್ಪರ್ಧೆಯ ಚಿಂತನೆ:
ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ನಿಜ ಎಂದು ತಿಳಿಸಿದ ರಘುಪತಿ ಭಟ್, “ಕಾಂಗ್ರೆಸ್ನಿಂದ ಬುಲಾಬ್ ಬಂದಿದೆ, ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ. ನನ್ನ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯ. ಯಾವುದೇ ರಾಜಕೀಯ ನಿರ್ಧಾರವನ್ನು ತಕ್ಷಣಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ’ ಎಂದು ತಿಳಿಸಿದರು. ಅಲ್ಲದೆ, ಅಗತ್ಯ ಬಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪರ್ಧಿಸುವ ಯೋಚನೆ ಇದೆ ಎಂದು ಅವರು ಹೇಳಿದರು.
ಬಿಜೆಪಿ ಕಾಯುವಿಕೆ ಮತ್ತು ನೋವಿನ ನುಡಿ:
“ಬಿಜೆಪಿಯವರಿಂದ ಕರೆ ಬರುತ್ತದೆ ಎಂದು ಕಾಯುತ್ತಿದ್ದೇನೆ” ಎಂದ ರಘುಪತಿ ಭಟ್, ಇಂದಿನ ಶಾಸಕರ ದಬ್ಬಾಳಿಕೆಯ ಬಗ್ಗೆ ಬಿಜೆಪಿ ಹಾಗೂ ಸಂಘದ ಪ್ರಮುಖರು ಮೌನ ವಹಿಸಿರುವುದಕ್ಕೆ ತಮ್ಮ ತೀವ್ರ ನೋವು ಹಾಗೂ ಬೇಸರವನ್ನು ವ್ಯಕ್ತಪಡಿಸಿದರು.
ಬೆಂಬಲಿಗರ ವಿಶ್ವಾಸ ಹಾಗೂ ಅಭಿಪ್ರಾಯ ಪಡೆದ ನಂತರವೇ ತಮ್ಮ ರಾಜಕೀಯ ಮುಂದಿನ ಹೆಜ್ಜೆಯ ಬಗ್ಗೆ ಸ್ಪಷ್ಟ ಚಿತ್ರಣ ನೀಡುವುದಾಗಿ ಅವರು ಪುನರುಚ್ಚರಿಸಿದ್ದಾರೆ.


























