Home ಜಿಲ್ಲೆ ಬೆಂಗಳೂರು ಕಲ್ಲುಗಣಿ- ಕ್ರಷರ್ ಮಾಲೀಕರಿಂದ ಬೃಹತ್ ಪ್ರತಿಭಟನೆ

ಕಲ್ಲುಗಣಿ- ಕ್ರಷರ್ ಮಾಲೀಕರಿಂದ ಬೃಹತ್ ಪ್ರತಿಭಟನೆ

ಬೆಂಗಳೂರು, ಆ.20: ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಂದ ಎರಡು ಕಡೆ ರಾಜಧನ ವಸೂಲಿ ಮಾಡುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ಸರ್ಕಾರದ ದ್ವಂದ್ವ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರ ಒಕ್ಕೂಟದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.


ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 5 ಸಾವಿರಕ್ಕೂ ಹೆಚ್ಚು ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು, ಕಾರ್ಮಿಕರು ಹಾಗೂ ಉದ್ಯಮದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಡಿ. ಸಿದ್ಧರಾಜು, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಕಲ್ಲುಗಣಿ ಮತ್ತು ಕ್ರಷರ್ ಉದ್ಯಮದ ಮೇಲೆ ಎರಡು ಕಡೆ ರಾಜಧನ ವಸೂಲಿ ಮಾಡುತ್ತಿರುವುದು ಸಂಪೂರ್ಣ ಅನ್ಯಾಯವಾಗಿದೆ ಎಂದು ಹೇಳಿದರು.


ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಅಗತ್ಯವಿರುವ ಜಲ್ಲಿ ಹಾಗೂ ಎಂ-ಸ್ಯಾಂಡ್ ಅನ್ನು ಪರಿಸರ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅನುಮತಿ ಪಡೆದು ಕಾನೂನುಬದ್ಧವಾಗಿ ಉತ್ಪಾದಿಸಲಾಗುತ್ತಿದೆ. ಆದರೂ ಇದೇ ಉದ್ಯಮದ ಮೇಲೆ ಮಾತ್ರ ಎರಡು ಬಾರಿ ರಾಜಧನ ವಸೂಲಿ ಮಾಡುವ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.


ಸರ್ಕಾರದ ನಿರಂತರ ಕಿರುಕುಳ ಮತ್ತು ಆರ್ಥಿಕ ಒತ್ತಡದಿಂದ ಉದ್ಯಮ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಒಕ್ಕೂಟದ ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಿ. ಸಿದ್ಧರಾಜು, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಡಿ.ಆರ್. ಮಹೇಶ್, ಸಿ.ಎಸ್. ಭಾಸ್ಕರ್, ಉಪಾಧ್ಯಕ್ಷರಾದ ಪ್ರವೀಣ್ ಬಿ. ಹಿರೇಮಠ್, ಪಂಚಮಿ ಶ್ರೀನಿವಾಸ ಬಿ.ಎನ್., ಅಬ್ದುಲ್ ಗನಿ ಮಜೀದ್, ಕೋಶಾಧಿಕಾರಿ ಉಮಾಶಂಕರಯ್ಯ, ಕಾರ್ಯದರ್ಶಿ ಚೌಧರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾವಿರಾರು ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು ಉಪಸ್ಥಿತರಿದ್ದರು.