Home ಜಿಲ್ಲೆ ಕಲಬುರಗಿ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು

ಕಲಬುರಗಿ,ಆ.21-ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಇತಿಹಾಸದಲ್ಲಿ ಡಿ.ದೇವರಾಜ ಅರಸು ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಮುಖ್ಯಮಂತ್ರಿಯಾಗಿ ಅವರು ಸಮಾಜದ ಹಿಂದುಳಿದ ವರ್ಗದವರಿಗೆ ಎಲ್.ಜಿ. ಹಾವನೂರು ವರದಿ ಜಾರಿಗೊಳಿಸಿ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರು. ಬಡವರು, ಶೋಷಿತರು ಹಾಗೂ ಭೂಹೀನರ ಏಳಿಗೆಗೆ ವಿಶೇಷ ಆದ್ಯತೆ ನೀಡಿ ‘ಉಳುವವನೇ ಭೂಮಿಯ ಒಡೆಯ’ ಎಂಬ ಆಶಯಕ್ಕೆ ಬಲ ನೀಡಿದ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು ಎಂದು ಪ್ರಭಾರಿ ಪ್ರಾಂಶುಪಾಲರಾದ ಡಾ.ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ನಗರದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ ಹಾಗೂ ಸದ್ಭಾವನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರದ ಏಕತೆ ಮತ್ತು ಅಭಿವೃದ್ಧಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಮತ್ತು ಡಿ.ದೇವರಾಜ ಅರಸು ಅವರ ಕೊಡುಗೆ ಸ್ಮರಣೀಯವಾಗಿದೆ ಎಂದರು.
ಸದ್ಭಾವನ ದಿನಾಚರಣೆ ಅಂಗವಾಗಿ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಸಿದ್ದಲಿಂಗಪ್ಪ ಬಿ.ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳು ದೇಶದ ಏಕತೆ, ಸಮಗ್ರತೆ, ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಸಹಬಾಳ್ವೆಯ ಮೌಲ್ಯಗಳನ್ನು ಕಾಪಾಡುವ ಸಂಕಲ್ಪ ಮಾಡಿದರು.
ಉಪನ್ಯಾಸಕರಾದ ಬಲರಾಮ್ ಚೌಹಾಣ್, ವಿಜಯಲಕ್ಷ್ಮಿ ರೆಡ್ಡಿ, ಶ್ರೀಶೈಲ್ ಖುರ್ದ , ಮಹಿಬೂಬ ನದಾಫ್, ಪಾಂಡು ಎಲ್. ರಾಥೋಡ್ , ಡಾ.ಶೀಲಾವತಿ ವಾಡೆಕರ್, ಡಾ.ಶಿವಪ್ಪ ಹುಣಿಚ್ಯಾಳ, ರಾಜೇಶ್ ಕೆ.ಜೆ., ನೇಸರ್ ಬಿಳಿಗಿಮಠ್, ಶಶಿಧರ್ ಭೂಸನೂರ, ಶ್ರೀನಿವಾಸ ಐಜಿ. ನಿರ್ಮಲಾ ಪವಾರ ಮತ್ತು ಸುಮಾ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.