Home ಜಿಲ್ಲೆ ಆರ್ಥಿಕ ಸಂಕಷ್ಟದಲ್ಲಿ ಹಂಪಿ ಕವಿವಿ 15 ತಿಂಗಳಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ ಪರದಾಟ

ಆರ್ಥಿಕ ಸಂಕಷ್ಟದಲ್ಲಿ ಹಂಪಿ ಕವಿವಿ 15 ತಿಂಗಳಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ ಪರದಾಟ

ಸಂಜೆವಾಣಿ ವಾರ್ತೆ

ಹೊಸಪೇಟೆ.ಸೆ.3 ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಅಧ್ಯಯನಕ್ಕೆ ಮೀಸಲಾದ ಕನ್ನಡದ ಏಕೈಕ ಕನ್ನಡ ವಿಶ್ವವಿದ್ಯಾಲಯ ಎಂಬ ಖ್ಯಾತಿ ಹೊಂದಿರುವ ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಕನ್ನಡ ನಾಡು, ನುಡಿ ಹಾಗೂ ಜಲದ ಸಂರಕ್ಷಣೆಗಾಗಿ ಕಳೆದ 35 ವರ್ಷಗಳ ಹಿಂದೆ ಈ ಭಾಗದಲ್ಲಿ ಆರಂಭಗೊಂಡ ಕನ್ನಡ ವಿಶ್ವವಿದ್ಯಾಲಯ, ಸರ್ಕಾರಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಇದರಿಂದಾಗಿ ಕಳೆದ 15 ತಿಂಗಳುಗಳಿಂದ ವೇತನವಿಲ್ಲದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅತಿಥಿ ಉಪನ್ಯಾಸಕರು ಹಾಗೂ ತಾಲ್ಕಾಲಿಕ ಸಿಬ್ಬಂದಿಗಳು, ಉನ್ನತ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕರ ಮೊರೆ ಹೋಗಿದ್ದಾರೆ.

ಈ ಕುರಿತು ಬುಧವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಸಿಬ್ಬಂದಿಗಳು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಹೆಚ್.ಆರ್.ಗವಿಯಪ್ಪ ಅವರಿಗೆ ಪ್ರತ್ಯೇಕವಾಗಿ ಮನವಿಪತ್ರ ಸಲ್ಲಿಸಿದ್ದಾರೆ.

ಅತಿಥಿ ಉಪನ್ಯಾಸಕರ ಒತ್ತಾಯ:

ಕಳೆದ 10-15 ವರ್ಷಗಳಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು. ಕಳೆದ ಸಾಲಿನ 11 ತಿಂಗಳ ಬಾಕಿ ವೇತನ ಹಾಗೂ ಪ್ರಸಕ್ತ ಸಾಲಿನ 4 ತಿಂಗಳ ವೇತನ ಸೇರಿದಂತೆ ಒಟ್ಟು 15 ತಿಂಗಳ ವೇತನ ಪಾವತಿ ಆಗಿರುವುದಿಲ್ಲ. ಇದರಿಂದಾಗಿ ನಮ್ಮ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ದಿನನಿತ್ಯದ ಜೀವನ ನಿರ್ವಹಣೆ, ವೈಧ್ಯಕೀಯ ವೆಚ್ಚ, ಮಕ್ಕಳ ಶಾಲಾ-ಕಾಲೇಜುಗಳ ಫೀ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.

ಈ ಕುರಿತು ಕುಲಪತಿಗಳು ಹಾಗೂ ಕುಲಸಚಿವರನ್ನು ಕೇಳಿದರೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಅತ್ಯಲ್ಪವಾಗಿದೆ. ಆರ್ಥಿಕ ಮುಗ್ಗಟ್ಟಿನ ಕಾರಣ ವೇತನ ನೀಡಲು ಆಗುತ್ತಿಲ್ಲ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ತಾವುಗಳು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ತಕ್ಷಣವೇ ಅತಿಥಿ ಉಪನ್ಯಾಸಕರ 15 ತಿಂಗಳ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಸಿಬ್ಬಂದಿಗಳಿಗೂ ಸರ್ಕಾರದ ಆಯವ್ಯಯ ಮುಂಗಡದಲ್ಲಿ ಪ್ರತ್ಯೇಕ ಆರ್ಥಿಕ ಮತ್ತು ನಿಯತಕಾಲಿಕ ವೇತನ ಅನುದಾನ ಕಲ್ಪಿಸುವಂತೆ ಉನ್ನತ ಶಿಕ್ಷಣ ಸಚಿವರು ಹಾಗೂ ಶಾಸಕರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ.

ತಾತ್ಕಾಲಿಕ ಸಿಬ್ಬಂದಿಗಳಿಗೆ 11 ತಿಂಗಳ ಬಾಕಿ:

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 15-20 ವರ್ಷಗಳಿಂದ  ಕಾರ್ಯನಿರ್ವಹಿಸುತ್ತಿರುವ 72 ತಾತ್ಕಾಲಿಕ ಆಡಳಿತ ಸಿಬ್ಬಂದಿಗಳಿಗೆ ಕಳೆದ ಸಾಲಿನ 7 ತಿಂಗಳ ವೇತನ ಬಾಕಿ ಹಾಗೂ ಪ್ರಸಕ್ತ ಸಾಲಿನ 4 ತಿಂಗಳ ವೇತನ ಸೇರಿದಂತೆ 11 ತಿಂಗಳ ವೇತನ ನೀಡಬೇಕಾಗಿದೆ.

ನಾವೆಲ್ಲಾ ಬಡ ಕುಟುಂಬದಿಂದ ಬಂದಿದ್ದು. ಸುಧೀರ್ಘ ಅವಧಿಯಿಂದ ವೇತನ ನೀಡದಿರುವುದರಿಂದ ಸಂಸಾರ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಮಕ್ಕಳ ಓದು, ಆನಾರೋಗ್ಯ, ಖರ್ಚು ವೆಚ್ಚಗಳನ್ನು ಬರಿಸುವುದು ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಶೀಘ್ರವೇ ನಮ್ಮ 11 ತಿಂಗಳ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಕಳೆದ 15-20 ವರ್ಷಗಳಿಂದ ತಾತ್ಕಾಲಿಕ ಆಡಳಿತ ಸಿಬ್ಬಂದಿಗಳಾಗಿರುವ ನಮ್ಮಗಳ ಸೇವೆಯನ್ನು ಖಾಯಂ ಗೊಳಿಸುವಂತೆ ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ತಾತ್ಕಾಲಿಕ ಸಿಬ್ಬಂದಿಗಳು ಉನ್ನತ ಶಿಕ್ಷಣ ಸಚಿವರು ಹಾಗೂ ಶಾಸಕರಿಗೆ ಸಲ್ಲಿಸಲಾದ ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಅತಿಥಿ ಉಪನ್ಯಾಸಕರಾದ ಡಾ.ತಿಮ್ಮಣ್ಣ ಭೀಮರಾಯ, ಡಾ.ಕೃಷ್ಣೆಗೌಡ,  ಸಿದ್ದರಾಮಯ್ಯ, ವಿರೂಪಾಕ್ಷಪ್ಪ ಇಟಗಿ, ತಾತ್ಕಾಲಿಕ ಸಿಬ್ಬಂದಿಗಳಾದ ಡಾ.ನಾಗವೇಣಿ, ಶ್ರೀನಿವಾಸ ಕಲಾಲ್, ಬಸವರಾಜ, ಶಿವಕುಮಾರ್, ಗಂಗಾಧರ, ನಂದಿನಿ, ಮಹಮದ್ ಶಫಿ ಸೇರಿದಂತೆ ಮತ್ತಿತರರು ಇದ್ದರು.