Home ಜಿಲ್ಲೆ ಮೈಸೂರು ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ: ನೋಂದಣಾಧಿಕಾರಿ ಮುನಿರಾಜು

ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ: ನೋಂದಣಾಧಿಕಾರಿ ಮುನಿರಾಜು

ಸಂಜೆವಾಣಿ ವಾರ್ತೆ
ಹನೂರು ಅ 11 :-
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಯಾವುದೇ ಕಾರಣಕ್ಕೂ ಒಬ್ಬೇ ಒಬ್ಬ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಹನೂರು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮುನಿರಾಜು ತಿಳಿಸಿದರು.


ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ ಅವರು ಹನೂರು ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 269 ಮತಗಟ್ಟೆಗಳಿದ್ದು, ಒಟ್ಟು 2,02,670 ಮತದಾರರಿದ್ದಾರೆ. ಇವರಲ್ಲಿ 1,01,425 ಪುರುಷರು, 1,01,241 ಮಹಿಳೆಯರು ಹಾಗೂ 4 ಇತರೆ ಮತದಾರರಿದ್ದಾರೆ ಎಂದು ಅಂಕಿ-ಅಂಶ ನೀಡಿದರು.


ಸಾರ್ವಜನಿಕರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು 2026ರ ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಬಂದಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಆಗಸ್ಟ್ 24 ರಿಂದ ಅಕ್ಟೋಬರ್ 22 ರವರೆಗೆ ನಡೆಯಲಿದ್ದು, ಅಕ್ಟೋಬರ್ 27, 2026 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.


ಚುನಾವಣಾ ಆಯೋಗದಿಂದ ವಿಚಾರಣೆಗೆ ಒಳಪಟ್ಟಿರುವ 679 ಪ್ರಕರಣಗಳಲ್ಲಿ ಈಗಾಗಲೇ 522 ಪ್ರಕರಣಗಳ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದ 157 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯಲ್ಲಿ ಮರಣ ಹೊಂದಿದ 2 ಹಾಗೂ ಡಬಲ್ ಎಂಟ್ರಿಯಾಗಿದ್ದ 4 ಸೇರಿ ಒಟ್ಟು 6 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಜೊತೆಗೆ, ಜೂನ್ 16 ರಿಂದ ಅಕ್ಟೋಬರ್ 6 ರವರೆಗೆ ಒಟ್ಟು 3,968 ನಮೂನೆಗಳು ಸ್ವೀಕೃತವಾಗಿವೆ. ಇದರಲ್ಲಿ ಮತದಾರರ ಸೇರ್ಪಡೆಗೆ (ನಮೂನೆ-6) 2,359, ಹೆಸರು ತೆಗೆದುಹಾಕಲು (ನಮೂನೆ-7) 28 ಹಾಗೂ ತಿದ್ದುಪಡಿ ಮತ್ತು ಸ್ಥಳಾಂತರಕ್ಕೆ (ನಮೂನೆ-8) ಒಟ್ಟು 3,968 (ವರ್ಗಾವಣೆಯ 1,216 ಹಾಗೂ ತಿದ್ದುಪಡಿಯ 2,752) ಅರ್ಜಿಗಳು ಸೇರಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ, ಉಪ ತಹಸೀಲ್ದಾರ್ ಸುರೇಖಾ, ಚುನಾವಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ಲೋಕೇಶ್ ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು.