Home ಜಿಲ್ಲೆ ಅನುಭವ, ಅನುಭಾವದಿಂದ ವಚನ ಸಾಹಿತ್ಯ ರಚನೆ

ಅನುಭವ, ಅನುಭಾವದಿಂದ ವಚನ ಸಾಹಿತ್ಯ ರಚನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ.05: ಆಚಾರ್ಯ ಮತ್ತು ಶಾಸ್ತ್ರ ಪರಂಪರೆ ಹಾದಿ ಬಿಟ್ಟು ಬದುಕಿನ ಮೂಲಕ ಅನುಭವ ಮತ್ತು ಅನುಭಾವ ಪಡೆದು ರಚನೆಯಾದ  ಸಾಹಿತ್ಯ ವಚನ ಸಾಹಿತ್ಯ ಎಂದು ಸಾಹಿತಿ ಮತ್ತು ಉಪನ್ಯಾಸಕ ಡಾ.ಯು.ಶ್ರೀನಿವಾಸ ಮೂರ್ತಿ ತಿಳಿಸಿದರು.

 ನಗರದ ತೊಗರಿ ವೀರಪ್ಪ ಕಾಲೇಜ್ ಆಫ್ ಫಾರ್ಮಸಿ ಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ.ಅಲ್ಲಂ ಕರಿಬಸಪ್ಪ ಮತ್ತು ಅಲ್ಲಂ ಸುಮಂಗಳಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸದ ಕನ್ನಡ ಸಾಹಿತ್ಯಕ್ಕೆ ಶಿವಶರಣರ ಕೊಡುಗೆ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ವಚನ ಸಾಹಿತ್ಯ ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಶರಣರ ಸಾಹಿತ್ಯ.ವೈಚಾರಿಕತೆಯೇ ಮೂಲವಿರುವ ಈ ಸಾಹಿತ್ಯ ಕ್ರಾಂತಿಯನ್ನು ಉಂಟುಮಾಡಿತು.ತಳಸಮುದಾಯ ಆದಿಯಾಗಿ ಅನೇಕ ವರ್ಗದ ಜನರು ಬಸವಣ್ಣನ ಹಾದಿಯಲ್ಲಿ ಬದುಕಿ, ಬದುಕಿದಂತೆ ವಚನಗಳು ಬರೆದರು.

 ಪ್ರಪಂಚದಲ್ಲೇ ವಿಶಿಷ್ಟವಾದ ಸಾಹಿತ್ಯ ಪ್ರಾಕಾರ ವಚನ ಸಾಹಿತ್ಯ.ಮಹಿಳೆಯರಿಗೆ ಸ್ಥಾನ ಮಾನ ನೀಡಿ ಅವರಲ್ಲೂ ವಚನ ಬರೆಯುವ ತಾಕತ್ತು ಬೆಳಸಿದ್ದು ಬಸವಣ್ಣನವರು. ಅನುಭವಮಂಟಪದಲ್ಲಿ ಶರಣರ ಜೊತೆ ವಿಷಯ ಚರ್ಚಿಸುವ ಸಾಮರ್ಥ್ಯ ನೀಡಿದ್ದು ವಚನ ಸಾಹಿತ್ಯ ಮತ್ತು ಬಸವಾದಿ ಶರಣರು ಎಂದರು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಅಲ್ಲಂ ಪ್ರಮೋದ್ ಮಾತನಾಡಿ ಕನ್ನಡ ಸಿರಿವಂತ ಭಾಷೆ, ಕನ್ನಡದ ಸಾಹಿತ್ಯ ಮತ್ತು ಸೊಗಸನ್ನು ಮನೆ ಮನೆಗೆ ತಲುಪಿಸುವ ಕೆಲಸ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.

 ಅದ್ಯಕ್ಷತೆವಹಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷರಾದ ಎಲ್ ಟಿ ಶೇಖರ್ ಮಾತನಾಡಿ ಭಾಷೆಗಳು ಬಳಸಿದಷ್ಟೂ ಬೆಳೆಯುತ್ತವೆ, 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲು  ನಿರ್ಣಯಸಲಾಗಿದೆ, ಇದಕ್ಕೆ ಬಳ್ಳಾರಿಯ ನಾಗರೀಕರಾದ ನಾವು ಬೆಂಬಲಿಸೋಣ ಎಂದರು.

 ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ನಾಗರೆಡ್ಡಿ ಅವರು ಪ್ರಾಸ್ತಾವಿಕ ಮಾತುಗಳಾಡಿದರು, ಪ್ರಾರ್ಥನೆಯನ್ನು ವಿದ್ಯಾರ್ಥಿ ಶ್ರಾವಣಿ ನಡೆಸಿಕೊಟ್ಟರು.