Home ಜಿಲ್ಲೆ ಮೈಸೂರು ಅಧಿಕಾರಿಗಳಿಂದ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘನೆ

ಅಧಿಕಾರಿಗಳಿಂದ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘನೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಅ.2:
-ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಬೇಗೂರು ಕುಮಾರ್ ಆರೋಪಿಸಿದರು.


ಪಿರಿಯಾಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನಗೆ ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಗೂರು ಗ್ರಾಮದಲ್ಲಿ ಸರ್ವೆ ಸಂಖ್ಯೆ 81/1 ರಲ್ಲಿ 4 ಎಕರೆ ಬೇಸಾಯದ ಜಮೀನಿದ್ದು.
ಈ ಜಾಗವು ನಮ್ಮ ಪಿತ್ರಾರ್ಜಿತ ಆಸ್ತಿಯಾಗಿದೆ. ಈ ಜಾಗದಲ್ಲಿ ತೆಂಗು, ಅಡಿಕೆ, ಶುಂಠಿ ಬೆಳೆಯನ್ನು ಬೆಳೆಯುತ್ತಾ ಮೂರು ತಲೆಮಾರುಗಳಿಂದ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್ ರವರು ನಮ್ಮ ಜಮೀನು ಗ್ರಾಮ ಠಾಣಾ ಜಾಗದಲ್ಲಿ ಇಲ್ಲದಿದ್ದರೂ ಕೂಡ ಒತ್ತುವರಿ ತೆರವು ಮಾಡುವಂತ್ತೆ ನಮ್ಮ ಜಮೀನಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಅಕ್ರಮ ಪ್ರವೇಶ ಮಾಡಿ ಬೆಳೆಗಳನ್ನು ನಾಶ ಮಾಡಿ ನಮ್ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.


ಈ ಜಾಗದ ವಿಚಾರವಾಗಿ ಈಗಾಗಲೇ ನಾವುಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ನ್ಯಾಯಾಲಯವು ಈ ಜಾಗದಲ್ಲಿ ಯಥಸ್ಥಿತಿ ಕಾಪಾಡುವಂತೆ ತಿಳಿಸಿ ಹಾಗೂ ತಡೆಯಾಜ್ಞೆಯನ್ನು ಆದೇಶ ಮಾಡಿದೆ. ಆದರೆ ಅಧಿಕಾರಿಗಳು ಸ್ಥಳೀಯ ಶಾಸಕ ಕೆ. ವೆಂಕಟೇಶ್ ರವರ ಒತ್ತಡಕ್ಕೆ ಮಣಿದು ದಲಿತ ಸಮುದಾಯದ ನಮ್ಮಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಅಳಲನ್ನು ತೋಡಿಕೊಂಡರು. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ನಮ್ಮಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ನ್ಯಾಯ ದೊರಕಿಸಿಕೊಡಬೇಕು ಹಾಗೂ ಅಧಿಕಾರಿಗಳಿಗೆ ತೊಂದರೆ ನೀಡದಂತೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಟಿ. ಮಹದೇವ್, ನಟರಾಜು, ಸ್ವಾಮಿ, ಸುದೀಪ್, ದೊರೆರಾಜು, ಮನು, ಸತೀಶ್ ಹಾಜರಿದ್ದರು.