Home ಸಿನೆಮಾ ವೀರಭೂಮಿಯಲ್ಲಿ ರಾಯಣ್ಣನ ಶೌರ್ಯಕ್ಕೆ ಸಿನಿಮೀಯ ಸ್ಪರ್ಶ

ವೀರಭೂಮಿಯಲ್ಲಿ ರಾಯಣ್ಣನ ಶೌರ್ಯಕ್ಕೆ ಸಿನಿಮೀಯ ಸ್ಪರ್ಶ

ಬೆಳಗಾವಿ ಜಿಲ್ಲೆಯ ನಂದಗಡದ 13 ಎಕರೆ ವಿಸ್ತೀರ್ಣದ ‘ವೀರಭೂಮಿ ಮ್ಯೂಸಿಯಂ’ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ತ್ಯಾಗ ಹಾಗೂ ಹೋರಾಟದ ಕಥೆ ಸಿನಿಮೀಯ ರೂಪದಲ್ಲಿ ಅನಾವರಣಗೊಂಡಿದೆ. ಸೆ.27ರಂದು ನಿರ್ಮಾಪಕ, ನಿರ್ದೇಶಕ ಹಾಗೂ ಛಾಯಾಗ್ರಾಹಕ ಅನಿಲ್ ಅಣ್ಣಯ್ಯ ಮ್ಯೂಸಿಯಂಗೆ ಭೇಟಿ ನೀಡಿ, ತಾವು ನಿರ್ದೇಶಿಸಿರುವ ಬಯೋಪಿಕ್ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದನ್ನು ವೀಕ್ಷಿಸಿದರು.

ರಾಯಣ್ಣನ ಕಾಲಘಟ್ಟದ ಹಲವು ಸನ್ನಿವೇಶಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದ್ದು, ಶಿಲ್ಪಗಳು, ಪುರಾತನ ಕಲಾಕೃತಿಗಳು ಹಾಗೂ ಡಿಜಿಟಲ್ ಪರದೆಗಳ ಮೂಲಕ ಐತಿಹಾಸಿಕ ಘಟನೆಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡಲಾಗಿದೆ. ಸಂಪಗಾವಿಯ ಕಚೇರಿ, ಸುರಪುರ ಅರಮನೆ ಸೇರಿದಂತೆ ಹಲವು ಸ್ಥಳಗಳ ಪುನರ್‌ನಿರ್ಮಾಣ ಗಮನ ಸೆಳೆಯುತ್ತದೆ.

2026ರ ಜನವರಿ 19ರಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿರುವ ಈ ಮ್ಯೂಸಿಯಂ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ತಮ್ಮ ಚಿತ್ರಗಳಿಗೆ ವೀಕ್ಷಕರಿಂದ ದೊರೆತ ಪ್ರತಿಕ್ರಿಯೆಯಿಂದ ಸಂತಸಗೊಂಡ ಅನಿಲ್ ಅಣ್ಣಯ್ಯ, ಸುದೀರ್ಘ ಪರಿಶ್ರಮದ ಫಲವಾಗಿ ಈ ಅನುಭವ ದೊರೆತಿದೆ ಎಂದರು.

‘ಆನ್‌ಲೀಲಾ ಫಿಲ್ಮ್ಸ್’ ಹಾಗೂ ‘ಆನ್‌ಲೀಲಾ ವಿಶುವಲ್ ಸೊಲ್ಯೂಷನ್ಸ್’ ಮೂಲಕ ಮುಂದಿನ ದಿನಗಳಲ್ಲಿ ಐತಿಹಾಸಿಕ ಬಯೋಪಿಕ್‌ಗಳು, ಮ್ಯೂಸಿಯಂ ಸಿನಿಮಾಗಳು ಹಾಗೂ ‘ಲಿಗಸಿ ಫಿಲ್ಮ್ಸ್’ ನಿರ್ಮಿಸುವ ಉದ್ದೇಶವನ್ನೂ ಅವರು ವ್ಯಕ್ತಪಡಿಸಿದ್ದಾರೆ.