Home ಜಿಲ್ಲೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 2,944 ಕೋಟಿ ರೂ ವಿನಿಯೋಗ:

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 2,944 ಕೋಟಿ ರೂ ವಿನಿಯೋಗ:

ಸಂಜೆವಾಣಿ ವಾರ್ತೆ

ಹೊಸಪೇಟೆ.ಆ.4 ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷಿ್ಮ, ಶಕ್ತಿಯೋಜನೆ ಹಾಗೂ ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳಿಗೆ ವಿಜಯನಗರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಖಜಾನೆಯಿಂದ 2944 ಕೋಟಿ ರೂ ಅನುದಾನ ವಿನಿಯೋಗ ಮಾಡಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ್ ನಾಯ್ಕ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ರಾಜ್ಯ ಸರ್ಕಾರವು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಅನ್ನಭಾಗ್ಯ, ಗೃಹಲಕ್ಷಿ್ಮ, ಗೃಹಜ್ಯೋತಿ, ಯುವನಿಧಿ ಶಕ್ತಿಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಅದರಂತೆ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಅನುಷ್ಠಾನಗೊಳಿಸಿ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಗಳ ತಲುಪಿಸುವ ಮೂಲಕ ರಾಜ್ಯ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದೆ. ಈ ಯೋಜನೆಗಳಲ್ಲಿನ ಕೆಲವು ಲೋಪಗಳನ್ನು ಸರಿಪಡಿಸಿಕೊಂಡು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪಂಚಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ಯಭಾಗ್ಯ ಯೋಜನೆಯಡಿ ಜಿಲ್ಲೆಯ ಸುಮಾರು 3.47 ಲಕ್ಷ ಕುಟುಂಬಗಳಿಗೆ 2023ರ ಆಗಸ್ಟ್ ನಿಂದ 2024ರ ಡಿಸೆಂಬರ್ ವರೆಗೆ ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ರೂ. 285 ಕೋಟಿ ಪಾವತಿ ಮಾಡಲಾಗಿದೆ. ನಂತರ ಹಣದ ಬದಲಾಗಿ ಪ್ರತಿಫಲಾನುಭವಿಗೆ 5 ಕೆಜಿಯಂತೆ ಪಡಿತರ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಅದರಂತೆ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ನೊಂದಣಿಯಾದ ಒಟ್ಟು 3,21,966 ಫಲಾನುಭವಿಗಳಿಗೆ 2023ರ ಜೂನ್ನಿಂದ 2026ರ ಜೂನ್ವರೆಗೆ 468.26 ಕೋಟಿ ಫಲಾನುಭವಿಗಳ ಪರವಾಗಿ ಸಹಾಯಧನ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 2,03,766 ಸ್ಥಾವರಗಳ ಸಮೀಕ್ಷೆ ಗುರಿ ಇದ್ದು, ಆ ಪೈಕಿ 1,35,311 ಸ್ಥಾವರಗಳ ಸಮೀಕ್ಷೆ ಕೈಗೊಂಡು ಶೇ.66.40 ರಷ್ಟು ಪ್ರಗತಿ ಸಾಧಿಸಿದೆ. ಈ ಮರು ಸಮೀಕ್ಷೆ ಪ್ರಕ್ರಿಯೆಯಲ್ಲಿ ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಹೊರ ರಾಜ್ಯದ ಫಲಾನುಭವಿಗಳ ಗುರುತಿಸಿ ಅನರ್ಹರನ್ನು ಗ್ಯಾರಂಟಿಗಳಿಂದ ಹೊರಗಿಡುವ ಮೂಲಕ ಅರ್ಹಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗುವುದು ಎಂದು ತಿಳಿಸಿದರು.

ಗೃಹಲಕ್ಷಿ್ಮ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟಾರೆ 3,02,275 ಪಡಿತರ ಚೀಟಿಗಳಿದ್ದು ಈ ಪೈಕಿ 3.02.017 ಫಲಾನುಭವಿಗಳು ನೊಂದಣಿಯಾಗಿದ್ದಾರೆ. ನೊಂದಣಿಯಾದ ಫಲಾನುಭವಿಗಳಿಗೆ ಗೃಹಲಕ್ಷಿ್ಮ ಯೋಜನೆಯಡಿ 2023ರ ಆಗಸ್ಟ್ ನಿಂದ 2026 ಮೇ ವರೆಗೆ ಒಟ್ಟು ರೂ.1,727 ಕೋಟಿ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯ ಮಾಡಲಾಗಿದೆ. ಜೂನ್ ತಿಂಗಳ ಅನುದಾನ ರೂ.31.38 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಪಾವತಿಯಾಗಲಿದೆ ಎಂದರು.

ಗೃಹಲಕ್ಷಿ್ಮ ಯೋಜನೆಯಡಿ ರಾಜ್ಯಾದ್ಯಂತ ನೊಂದಣಿಯಾಗಿ ಮೃತರಾದ ಬ್ಯಾಂಕ್ ಖಾತೆಗೆ ಸುಮಾರು ರೂ.117 ಕೋಟಿ ಪಾವತಿಯಾಗಿದೆ. ಮೃತರ ಖಾತೆಗೆ ಪಾವತಿಯಾದ ಮೊತ್ತದಲ್ಲಿ ಈಗಾಗಲೇ ರೂ.20 ಕೋಟಿ ಮೊತ್ತವನ್ನು ಸರ್ಕಾರದ ಖಜಾನೆಗೆ ಹಿಂತಿರುಗಿಸಲಾಗಿದೆ. ಬಾಕಿ ಹಣ ವಾಪಾಸು ಪಡೆಯಲು ಪ್ರಯತ್ನ ನಡೆದಿದೆ.

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಇಡೀ ದೇಶವೇ ಮೆಚ್ಚಿರುವ ಯೋಜನೆ ಶಕ್ತಿ ಯೋಜನೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 2026 ಜೂನ್ವರೆಗೂ 10.29 ಕೋಟಿ ವಯಸ್ಕ ಪ್ರಯಾಣಿಕರು ಹಾಗೂ 47ಲಕ್ಷ ಮಕ್ಕಳು ಪ್ರಯಾಣ ಸೇರಿ ಒಟ್ಟು 10.76 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಇದಕ್ಕಾಗಿ ರೂ.430 ಕೋಟಿ ಹಣ ಪಾವತಿಸಲಾಗಿದೆ. ಅದಲ್ಲದೇ ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ 6ನೇ ಗ್ಯಾರಂಟಿ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಅವಕಾಶ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಇದುವರೆಗೂ 14,638 ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಪಂಚಗ್ಯಾರಂಟಿ ಯೋಜನೆಗಳ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಡಿ ಇದುವರೆಗೂ ಜಿಲ್ಲೆಯಲ್ಲಿ 12,982 ಫಲಾನುಭವಿಗಳು ನೊಂದಣಿಯಾಗಿದ್ದಾರೆ. ನೊಂದಣಿಯಾದವರ ಪೈಕಿ 12,688 ಪದವೀಧರರು ಹಾಗೂ 294 ಡಿಪ್ಲೊಮಾ ಪದವೀಧರರು ಸೇರಿದ್ದಾರೆ. ನೊಂದಣಿಯಾದ ವಿದ್ಯಾರ್ಥಿಗಳಿಗೆ ರೂ.32.93 ಕೋಟಿ ಸಹಾಯಧನ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ನೊಂದಣಿ ಪ್ರಕ್ರಿಯೆ ಸಾಕಷ್ಟು ಹಿಂದುಳಿದಿದೆ. ಆದ್ದರಿಂದ ಬಸ್ ನಿಲ್ದಾಣ, ಜನನಿಬಿಡ ಸಾರ್ವಜನಿಕ ಪ್ರದೇಶಗಳಲ್ಲಿ ಯುವನಿಧಿ ಯೋಜನೆ ನೊಂದಣಿ ಕುರಿತು ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ, ಉಪಾಧ್ಯಕ್ಷರಾದ ಕೆ.ಬದಾವಲಿ, ಶಾಂತನಗೌಡ, ಜಿಲ್ಲಾ ಪಂಚಾಯತ್ ಜಿಲ್ಲಾ ಯೋಜನಾ ನಿರ್ದೇಶಕ ಅನ್ನದಾನಸ್ವಾಮಿ ಇದ್ದರು.