Home ಜಿಲ್ಲೆ ಮೈಸೂರು ಮೈಸೂರಿನ ಪೌರಕಾರ್ಮಿಕರು ಹಾಗೂ ದಸರಾ ಆನೆಗಳ ಮಾವುತರಿಗೆ ಆರೋಗ್ಯ ತಪಾಸಣಾ ಶಿಬಿರಗಳು

ಮೈಸೂರಿನ ಪೌರಕಾರ್ಮಿಕರು ಹಾಗೂ ದಸರಾ ಆನೆಗಳ ಮಾವುತರಿಗೆ ಆರೋಗ್ಯ ತಪಾಸಣಾ ಶಿಬಿರಗಳು

ಸಂಜೆವಾಣಿ ನ್ಯೂಸ್
ಮೈಸೂರು:ಅ.14:-
ಮೈಸೂರು ಮಹಾನಗರ ಪಾಲಿಕೆ (ಒಅಅ) ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಜೊತೆಗೂಡಿ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ನಗರದ 200ಕ್ಕೂ ಹೆಚ್ಚು ಸ್ವಚ್ಛತಾ ಸಿಬ್ಬಂದಿ ಮತ್ತು ದಸರಾ ಆನೆಗಳ ಆರೈಕೆದಾರರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಸೇವೆಯನ್ನು ನೀಡಿದೆ.
ಮೈಸೂರು ಪಾಲಿಕೆಯ ಸುಮಾರು 100 ಸ್ವಚ್ಛತಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸುವ ಮೂಲಕ ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಶ್ರೀಮತಿ ಎಂ. ಕೆ. ಸವಿತಾ, ಸಹಾಯಕ ಆಯುಕ್ತರಾದ ಶ್ರೀಮತಿ ರತ್ನಾಂಬಿಕಾ ಮತ್ತು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ಸಂದೀಪ್ ಪಟೇಲ್ ಬಿ. ಜೆ. ಭಾಗವಹಿಸಿದ್ದರು.


ಮೈಸೂರು ಅರಮನೆ ಆವರಣದಲ್ಲಿ ಎರಡನೇ ಶಿಬಿರವನ್ನು ನಡೆಸಲಾಯಿತು. ಅರಣ್ಯ ಇಲಾಖೆಯ ಅಧಿಕಾರಿ (ವನ್ಯಜೀವಿ ವಿಭಾಗ) ಡಾ. ಐ. ಬಿ. ಪ್ರಭು ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಶಿಬಿರದಲ್ಲಿ, ದಸರಾ ಆನೆಗಳ ಮಾವುತರು, ಕಾವಾಡಿಗರು ಮತ್ತು ಅವರ ಕುಟುಂಬದವರು ಸೇರಿ 100ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡರು.


ಎರಡೂ ಶಿಬಿರಗಳಲ್ಲಿ ವಿವಿಧ ರೀತಿಯ ರಕ್ತ ಪರೀಕ್ಷೆ ಹಾಗೂ ಇತರ ಮುಖ್ಯ ಆರೋಗ್ಯ ತಪಾಸಣೆಗಳನ್ನು ಮಾಡಲಾಯಿತು. ಜೊತೆಗೆ, ಕಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ತಜ್ಞ ವೈದ್ಯರಿಂದ ಉಚಿತ ಸಲಹೆಗಳನ್ನು ನೀಡಲಾಯಿತು.
“ಮೈಸೂರು ಮಹಾನಗರ ಪಾಲಿಕೆಯ 100ಕ್ಕೂ ಹೆಚ್ಚು ಸ್ವಚ್ಛತಾ ಸಿಬ್ಬಂದಿಗಾಗಿ ಮಣಿಪಾಲ್ ಆಸ್ಪತ್ರೆಯು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ತುಂಬಾ ಸಂತೋಷ ತಂದಿದೆ. ಶಿಬಿರದಲ್ಲಿ ಪ್ರಮುಖ ತಪಾಸಣೆಗಳನ್ನು ನಡೆಸಿ, ಮಹಿಳಾ ಸಿಬ್ಬಂದಿಗೆ ವಿಶೇಷ ಆರೋಗ್ಯ ಸಲಹೆಗಳನ್ನು ನೀಡಲಾಯಿತು.,” ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಎಂ. ಕೆ. ಸವಿತಾ ತಿಳಿಸಿದರು.


“ಆನೆ ಮಾವುತರ ಪಾತ್ರ ಬಹಳ ಮುಖ್ಯವಾಗಿದ್ದು, ಅವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮಣಿಪಾಲ್ ಆಸ್ಪತ್ರೆಯು ಮಾವುತರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ, ಪ್ರಮುಖ ತಪಾಸಣೆಗಳು ಹಾಗೂ ತಜ್ಞ ವೈದ್ಯರಿಂದ ಸಲಹೆ ನೀಡಿದ್ದು ಸಹಕಾರಿಯಾಯಿತು” ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಆಅಈ) ಡಾ. ಐ. ಬಿ. ಪ್ರಭುಗೌಡ ತಿಳಿಸಿದರು.
ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ಸಂದೀಪ್ ಪಟೇಲ್ ಬಿ. ಜೆ. ಅವರು ಮಾತನಾಡಿ, “ಪೌರಕಾರ್ಮಿಕರು ಮತ್ತು ಮಾವುತರು ನಮ್ಮ ನಗರದ ಬೆನ್ನೆಲುಬು. ನಗರವನ್ನು ಸ್ವಚ್ಛವಾಗಿಡುವ ಮತ್ತು ನಮ್ಮ ಸಂಸ್ಕೃತಿಯನ್ನು ಕಾಯುವ ಈ ಜನರಿಗೆ ಉತ್ತಮ ಆರೋಗ್ಯ ಸೇವೆ ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ” ಎಂದು ಹೇಳಿದರು.