
ಮೈಸೂರು, ಅ.9:ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ನಿಜವಾದ ರಾಯಭಾರಿಗಳಾದ ಮಾವುತ ಮತ್ತು ಕಾವಾಡಿಗಳ ಬಗ್ಗೆ ಅರಮನೆ ಮಂಡಳಿ ಮತ್ತು ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದಸರಾಕ್ಕೆ ಒಂದೂವರೆ ತಿಂಗಳು ಮೊದಲೇ ಅರಮನೆ ಆವರಣಕ್ಕೆ ಆಗಮಿಸಿ, ಆನೆಗಳ ಆರೈಕೆಯಲ್ಲಿ ತೊಡಗುವ ಮಾವುತ, ಕಾವಾಡಿ ಕುಟುಂಬಗಳಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನೂ ಒದಗಿಸಿಲ್ಲ.
ಅರಮನೆ ಆವರಣದಲ್ಲಿ ಅವರಿಗೆ ನೀಡಲಾಗಿರುವ ಶೌಚಾಲಯಗಳು ಸ್ವಚ್ಛಗೊಳಿಸದೆ ಗಬ್ಬೆದ್ದು ನಾರುತ್ತಿವೆ. ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲದೆ ಅವರು ಪರದಾಡುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಮಾವುತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾವುತ, ಕಾವಾಡಿಗಳ ವಸತಿ ಮತ್ತು ಸೌಲಭ್ಯಗಳ ಜವಾಬ್ದಾರಿ ಹೊತ್ತಿರುವ ಅರಮನೆ ಮಂಡಳಿ ಹಾಗೂ ಅವರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾದ ಅರಣ್ಯ ಇಲಾಖೆ, ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ದಸರಾವನ್ನು ಅದ್ಧೂರಿಯಾಗಿ ಆಚರಿಸುವ ಸರ್ಕಾರ, ಅದರ ಹಿಂದಿರುವ ನಿಜವಾದ ಶ್ರಮಿಕರನ್ನು ಅತೀ ಅಸಡ್ಡೆಯಿಂದ ನಡೆಸಿಕೊಳ್ಳುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


























