Home ಜಿಲ್ಲೆ ಮಂಗಳೂರು ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಖ್ಯಾತ ಹುಲಿ ವೇಷದ ಕಲಾವಿದ ಮಂಜುನಾಥ್ ಸಾವು

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಖ್ಯಾತ ಹುಲಿ ವೇಷದ ಕಲಾವಿದ ಮಂಜುನಾಥ್ ಸಾವು

ಉಡುಪಿ-ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮಾವರ ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರಾವಳಿಯ ಖ್ಯಾತ ಹುಲಿ ವೇಷದ ಕಲಾವಿದ ಮಂಜುನಾಥ್ (೪೩) ಮೃತಪಟ್ಟಿದ್ದಾರೆ.
ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರ ನಿವಾಸಿಯಾಗಿದ್ದ ಮಂಜುನಾಥ್, ಗೋವಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಇನ್ನೋವಾ ಕಾರಿನಲ್ಲಿ ನಾಲ್ವರು ಸಹ ಪ್ರಯಾಣಿಕರೊಂದಿಗೆ ಉಡುಪಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಬ್ರಹ್ಮಾವರದ ಹೇರೂರು ರೂಡ್‌ಸೆಟ್ ಕ್ರಾಸಿಂಗ್ ಸಮೀಪ ಉಡುಪಿ ಕಡೆಗೆ ಸಾಗುತ್ತಿದ್ದ ವೇಗದೂತ ಬಸ್ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಜುನಾಥ್ ಕರಾವಳಿಯ ಹುಲಿ ವೇಷ ಪರಂಪರೆಯಲ್ಲಿ ಪರಿಚಿತ ಹೆಸರಾಗಿದ್ದು, ಹಲವು ವರ್ಷಗಳಿಂದ ಹುಲಿ ವೇಷಧಾರಿಗಳಿಗೆ ವಿಶಿಷ್ಟ ಮತ್ತು ಆಕರ್ಷಕ ಪೈಂಟಿಂಗ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಕಲಾರಂಗದಲ್ಲಿ ಶೋಕ ವ್ಯಕ್ತವಾಗಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.