
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.28: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬದವರ ವಿರುದ್ದ ಅತ್ಯಂತ ಕೆಳಮಟ್ಟದಲ್ಲಿ ಮಾತನಾಡುತ್ತಿರುವ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಕೆ.ಆರ್.ಪೇಟೆಯ ಶಾಸಕ ಹೆಚ್.ಟಿ.ಮಂಜು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಾಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹೆಚ್.ಟಿ.ಮಂಜು ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಲಘುವಾಗಿ ಮಾತನಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಅವರ ನಡೆಯನ್ನು ಖಂಡಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚೆ ಅಂಗಿ ಬಿಟ್ಟರೆ ಬಳಸುವ ಎಲ್ಲವೂ ದುಬಾರಿ ಬೆಲೆಯ ವಸ್ತುಗಳನ್ನು ಬಳಸುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದರು. ಪ್ರದೀಪ್ ಈಶ್ವರ್ ಅವರ ಈ ಹೇಳಿಕೆಯ ವಿರುದ್ದ ಕೆಂಡಾಮಂಡಲರಾದ ಶಾಸಕ ಹೆಚ್.ಟಿ.ಮಂಜು ಪ್ರದೀಪ್ ಈಶ್ವರ್ ವಿರುದ್ದ ತೀವ್ರ ವಾಗ್ದಳಿ ನಡೆಸಿದರು.
ನಾನು ಮತ್ತು ನೀನು ಇಬ್ಬರೂ ಇದೇ ಮೊದಲ ಬಾರಿಗೆ ಶಾಸಕರಾಗಿದ್ದೇವೆ. ನಮ್ಮ ನಡೆಯಿಂದ ಶಾಸಕತ್ವದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬರಬಾರದು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಎರಡು ಅವಧಿಗೆ ನಾಡಿನ ಮುಖ್ಯಮಂತ್ರಿಯಾಗಿದ್ದವರು. ಅವರನ್ನು ಬುಂಡೇದಾಸ, ಮುಕುಲ್ ಜೋಗಿ, ನಿನ್ನದನ್ನು ಹಾಸಿಕೋ, ಹೊದ್ದಿಕೋ ಎಂದು ಹೇಳುವ ಮಟ್ಟಕ್ಕೆ ನೀನು ಬೆಳೆದಿಲ್ಲ. ಡೈಲಾಗ್ ಹೊಡೆದ ಮಾತ್ರಕ್ಕೆ ನೀನು ದೊಡ್ಡ ಲೀಡರ್ ಆಗಲು ಸಾಧ್ಯವಿಲ್ಲ. ನನ್ನಂತೆಯೇ ನೀನು ಒಬ್ಬ ಸಾಮಾನ್ಯ ಶಾಸಕ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿತ್ವ ನಿನ್ನದಲ್ಲ ನಿನ್ನ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಟ್ರೋಲ್ ಮಾಡುತ್ತಿದ್ದಾರೆ. ಕೆಲವು ಸಂಘಟನೆಗಳು ನಿನಗೆ ಹೊಡೆಯಲು ಚಪ್ಪಲಿ ಹಿಡಿದು ನಿಂತಿದ್ದವು. ಆಗ ನೀನು ಪೆÇಲೀಸ್ ರಕ್ಷಣೆಯಲ್ಲಿ ಹೋಗಿದ್ದೆ. ಅದನ್ನು ನೀನು ನೆನಪು ಮಾಡಿಕೋ, ನಿನಗೆ ಮಾನ ಮರ್ಯಾದೆ ಎನ್ನುವುದೇ ಇಲ್ಲ. ಎಲ್ಲವನ್ನು ಕಿತ್ತು ನಿಂತಿದ್ದೀಯಾ ಎಂದು ಪ್ರದೀಪ್ ಈಶ್ವರ್ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಹೆಚ್.ಟಿ.ಮಂಜು ಶಾಸಕತ್ವದ ಘನತೆ ಗೌರವಗಳಿಗೆ ಚ್ಯುತಿಬಾರದಂತೆ ನಾಲಿಗೆಯನ್ನು ಬಿಗಿ ಹಿಡಿಯುವಂತೆ ಸಲಹೆ ನೀಡಿದರು.
ಜೆಡಿಎಸ್ ಪಕ್ಷದ ವರಿಷ್ಠರಾದ ಕುಮಾರಣ್ಣ ಜನರಿಗೆ ಮೋಸ ಮಾಡಿ ಹಣ ಸಂಪಾದಿಸಿಲ್ಲ. ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಜಮೀನುಗಳನ್ನು ಡಿ ನೋಟಿಫಿಕೇಷನ್ ಮಾಡಿ ಅಥವಾ ಗಣಿಗಾರಿಕೆ ಮಾಡಿ ಹಣ ಸಂಪಾದಿಸಿಲ್ಲ. ಅವರು ಸಿನಿಮಾ ನಿರ್ಮಾಪಕರಾಗಿ ಬಂದ ಲಾಭದಲ್ಲಿ ಒಂದಷ್ಟು ಆಸ್ತಿ ಗಳಿಸಿದ್ದಾರೆ. ಕುಮಾರಣ್ಣ ಕೊಂಡುಕೊಂಡಿರುವ ಆಸ್ತಿ ಒಂದು ಎಕರೆಗೆ ಒಂದು ಕೋಟಿ ಎಂದು ಹೇಳಿಕೆ ನೀಡಿದ್ದೀಯಾ. ಕುಮಾರಣ್ಣ ನೆನ್ನೆ ಮೊನ್ನೆ ಆಸ್ತಿ ಸಂಪಾದನೆ ಮಾಡಿಲ್ಲ. ಅವರ ಆಸ್ತಿಯಿರುವ ಭಾಗದ ಸಬ್ ರಿಜಿಸ್ಟಾರ್ ಕಛೇರಿಗೆ ಹೋಗು. ಅವರು ಜಮೀನು ಕೊಂಡುಕೊಂಡ ಅವಧಿಯಲ್ಲಿ ಅಲ್ಲಿನ ಜಮೀನಿನ ಮೌಲ್ಯ ಎಷ್ಟಿತ್ತು ಎನ್ನುವುದು ಗೊತ್ತಾಗುತ್ತದೆ.
ಶಾಸಕನಾದವನಿಗೆ ತನ್ನ ಮಾತಿನ ಮೇಲೆ ಹಿಡಿತವಿರಬೇಕು. ಕುಮಾರಣ್ಣ, ಅನಿತಕ್ಕ ಅವರ ಬಗ್ಗೆ ಮಾತನಡುವ ಮುನ್ನ ನಿನ್ನ ನಾಲಿಗೆ ಮೇಲೆ ಹಿಡಿತವಿರಲಿ. ದೊಡ್ಡವರ ಬಗ್ಗೆ ಹೇಳಿದಾಕ್ಷಣ ಮಾಸ್ ಲೀಡರ್ ಆಗಬಹುದು ಎಂದು ಕನಸು ಕಾಣುತ್ತಿದ್ದಿಯಾ. ಮುಂದುವರೆದರೆ ನಿನಗಿಂತ ಎರಡರಷ್ಟು ಮಾತನಾಡುವ ತಾಕತ್ತು ನಮಗೂ ಇದೆ. ನಿನ್ನ ಮಾತು ಇದೇ ಕೊನೆಯಾಗಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಹೆಚ್.ಟಿ.ಮಂಜು ಎಚ್ಚರಿಕೆ ನೀಡಿದರು.

























