
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.14- ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಒಂದನ್ನೂ ಪರಿಶಿಷ್ಟ ಜಾತಿಗೆ ಮೀಸಲು ಮಾಡದೇ ದಲಿತರಿಗೆ ಅನ್ಯಾಯ ಮಾಡಲಾಗಿದೆ ಎಂದು ಕಾನ್ಷಿರಾಂ ಅಭಿಮಾನಿಗಳ ಬಳಗದ ಮುಖಂಡ ವಾಸು ಹೊಂಡರಬಾಳು ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಮತಗಳನ್ನು ಪಡೆದು ನಾಲ್ಕು ಬಾರಿ ಶಾಸಕರಾಗಿರುವ, ಎರಡು ಬಾರಿ ಸಚಿವರಾಗಿರುವ ಸಿ, ಪುಟ್ಟರಂಗಶೆಟ್ಟರಿಗೆ ದಲಿತರಲ್ಲಿ ಎರಡನೇ ದರ್ಜೆ ನಾಯಕರನ್ನು ಬೆಳೆಸುವಲ್ಲಿ ಇಷ್ಟವಿಲ್ಲ. ಹೀಗಾಗಿ ಸಾಮಾನ್ಯ ಕ್ಷೇತ್ರಗಳನ್ನಾಗಿ ಮಾಡಿಸಿಕೊಂಡಿದ್ದಾರೆ. ದಲಿತರಲ್ಲಿ 2ನೇ ದರ್ಜೆಯ ನಾಯಕರು ಸೃಷ್ಟಿಯಾಗಬಾರವೆಂಬ ದುರುದ್ದೇಶ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಚಂದಕವಾಡಿ ಹಾಗೂ ಉಡಿಗಾಲ ಜಿ.ಪಂ. ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲಾಗಿತ್ತು. ಆದರೆ, ಈಗ ಅದು ಕೂಡ ಸಾಮಾನ್ಯ ಕ್ಷೇತ್ರವಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7 ಕ್ಷೇತ್ರಗಳಲ್ಲಿ ಎಸ್ಸಿಗೆ ಮೀಸಲಿದೆ. ಆದರೆ, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಹ ಪರಿಶಿಷ್ಟ ಜಾತಿ ಮೀಸಲು ಆಗಿಲ್ಲ ಇದು ಕ್ಷೇತ್ರದ ದಲಿತರ ಸಮುದಾಯಕ್ಕೆ ಮಾಡಿದ ಅನ್ಯಾಯವಲ್ಲವೇ ಎಂದು ಪ್ರಶ್ನೆ ಮಾಡಿದರು.
ಜಿಪಂ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಲ್ಲಿ ದಲಿತರು ಗೆದ್ದರೆ ಜನಾಂಗದ ಕಷ್ಟ ಸುಖಗಳಿಗೆ ಭಾಗಿಯಾಗಲು ಅನುಕೂಲವಾಗಲಿದೆ. ಆದರೆ, ಇದನ್ನು ತಪ್ಪಿಸಲು ಹುನ್ನಾರ ಮಾಡಲಾಗಿದೆ. ಇದನ್ನು ಈಗಾಗಲೇ ಜಿ.ಪಂ. ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿದ್ದವರರು ಯಾವೊಬ್ಬ ದಲಿತ ನಾಯಕರು ವಿರೋಧಿಸದಿರುವುದು ಖಂಡನೀಯ. ಇಂಥ ಧೋರಣೆಯಿಂದಲೇ ಕ್ಷೇತ್ರದಲ್ಲಿ 50 ಸಾವಿರಕ್ಕು ಹೆಚ್ಚು ದಲಿತರ ಮತವಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರು ಸ್ಪರ್ಧೆ ಮಾಡಿ. ಗೆಲ್ಲಲು ಸಾಧ್ಯವೆ? ಇದರ ಬಗ್ಗೆ ಸಚಿವರಾದ ಪುಟ್ಟರಂಗಶೆಟ್ಟರು ಅತ್ಮವಲೋಕನ ಮಾಡಿಕೊಂಡು ಕ್ಷೇತ್ರಗಳ ಮೀಸಲಾತಿಯನ್ನು ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ದೊಡ್ಡರಾಯಪೇಟೆ ಪಿಎಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಪರಿಶಿಷ್ಟ ಜಾತಿ ಮಹದೇವಯ್ಯ ಅವರಿಂದ ರಾಜೀನಾಮೆ ಕೊಡಿಸಿ, ತಾವೇ ನಿರ್ದೇಶಕರಾಗಿ ಆಯ್ಕೆಯಾದರು. ಅಲ್ಲದೇ ಚಾಮುಲ್ ನಿರ್ದೇಶಕರನ್ನಾಗಿ ಸಚಿವರ ಪುತ್ರಿ ಶೀಲಾ ಪುಟ್ಟರಂಗಶೆಟ್ಟರನ್ನು ಮಾಡುವ ಮೂಲಕ ಸಹಕಾರ ಒಕ್ಕೂಟದಲ್ಲಿ ಮಗಳಿಗೆ ಅವಕಾಶ ಮಾಡಿಕೊಟ್ಟರು. ಈಗ ಜಿ.ಪಂ. ಚುನಾವಣೆಯಲ್ಲಿ ಚಂದಕವಾಡಿ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ನೀಡಿ, ಅಲ್ಲಿಯೂ ತಮ್ಮ ಪುತ್ರ ಕುಸುಮರಾಜ್ನನ್ನು ಗೆಲ್ಲಿಸಿ, ತನ್ನ ನಂತರ ನನ್ನ ಮಗ ಕ್ಷೇತ್ರದ ಉತ್ತರಾಧಿಕಾರಿ ಮಾಡಲು ದಲಿತರ ಸಮುದಾಯದ ಎರಡನೇ ಹಂತದ ನಾಯಕರ ರಾಜಕೀಯ ಭವಿಷ್ಯವನ್ನು ಹಾಳು ಮಾಡಲು ಮುಂದಾಗಿದ್ದಾರೆ. ಈಗಲೂ ಪುಟ್ಟರಂಗಶೆಟ್ಟರಿಗೆ ಅವಕಾಶವಿದ್ದು ಇನ್ನಾದರೂ ಆಗಿರುವ ತಪ್ಪನ್ನು ಸರಿಪಡಿಸಿ ದಲಿತರಿಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಚಿವರ ನಡೆಯ ವಿರುದ್ದವಾಗಿ ಅಭಿಯಾನವನ್ನು ಆರಂಭಿಸಲಾಗುತ್ತದೆ. ಚಾ.ನಗರ ವಿಧಾನಸಭಾ ಕ್ಷೇತ್ರ ಸೇರಿ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಂತೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಹೊಂಡರಬಾಳು ವಾಸು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾನ್ಷಿರಾಂ ಅಭಿಮಾನಿಗಳ ಬಳಗದ ಸಿದ್ದಯ್ಯನಪುರ ಎಸ್.ಪಿ.ಮಹೇಶ್, ದೊಡ್ಡರಾಯಪೇಟೆ ಸಿದ್ದರಾಜು, ರಂಗಸ್ವಾಮಿ, ಮಂಗಲ ರವಿ ಇದ್ದರು.

























