
ಸಂಜೆವಾಣಿ ನ್ಯೂಸ್
ಮೈಸೂರು: ಅ.06:- ಜಿಲ್ಲೆಯಲ್ಲಿ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಬರ ಅಧ್ಯಯನ ತಂಡ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಉಪ ಆಯುಕ್ತ ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರದ ಉಪನಿರ್ದೇಶಕ ಕರಣ್ ಚೌಧರಿ ಭಾಗವಹಿಸಿ ಅಧಿಕಾರಿಗಳಿಗೆ ಮಾಹಿತಿ ಪಡೆದರು.
ಶೇ.59ರಷ್ಟು ಮಳೆ ಕೊರತೆ: ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ.ಜಿ, ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಮಳೆ ಕೊರತೆ ಅತ್ಯಂತ ತೀವ್ರವಾಗಿದೆ. ಜಿಲ್ಲೆಯಲ್ಲಿ ಶೇ.59ರಷ್ಟು ಮಳೆ ಕೊರತೆಯಾಗಿದ್ದು, ಭೀಕರ ಬರ ಪರಿಸ್ಥಿತಿ ತಲೆದೋರಿದೆ ಎಂದು ವಿವರಿಸಿದರು.
ಜಲಾಶಯಗಳ ಸ್ಥಿತಿಗತಿ: ಪ್ರಸ್ತುತ ಕೆಆರ್ಎಸ್ ಜಲಾಶಯದಲ್ಲಿ ಲೈವ್ ಕೆಪಾಸಿಟಿ 17.86 ಟಿಎಂಸಿ ಇದ್ದು, ಕಳೆದ ಬಾರಿಗೆ (21.83 ಟಿಎಂಸಿ) ಹೋಲಿಸಿದರೆ 5 ಟಿಎಂಸಿಯಷ್ಟು ಕೊರತೆ ಕಂಡುಬಂದಿದೆ. ಕಬಿನಿ ಜಲಾಶಯದಲ್ಲಿ ಪ್ರಸ್ತುತ ಲೈವ್ ಕೆಪಾಸಿಟಿ ಕೇವಲ 1.31 ಟಿಎಂಸಿ ಇದ್ದು, ಕಳೆದ ಬಾರಿಗೆ (8.71 ಟಿಎಂಸಿ) ಹೋಲಿಸಿದರೆ 7 ಟಿಎಂಸಿ ಯಷ್ಟು ಭಾರಿ ಕೊರತೆ ಉಂಟಾಗಿದೆ.
ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿಗಾಗಿ ಹಾಗೂ ಕೆರೆಗಳನ್ನು ತುಂಬಿಸಲು ಮಾತ್ರ ಕಾಯ್ದಿರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
122.34 ಕೋಟಿ ಬೆಳೆ ನಷ್ಟ: ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್.ರವಿ ಮಾತನಾಡಿ, ಜಿಲ್ಲೆಯಲ್ಲಿ ಬರದಿಂದಾಗಿ ಸುಮಾರು 1,43,308 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಎಸ್ಡಿಆರ್ಎಫ್ ನಿಯಮಾವಳಿಗಳ ಪ್ರಕಾರ ಅಂದಾಜು 122.34 ಕೋಟಿ ರೂಪಾಯಿಗಳಷ್ಟು ಭಾರಿ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯಾ.ಆರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

























