
ಉಪ್ಪಿನಂಗಡಿ: ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಕಟ್ಟಡವೊಂದರಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಜಾಲದ ಪತ್ತೆ ಪ್ರಕರಣಕ್ಕೆ ಸಂಬಂಧಿದಂತೆ ತಲೆ ಮರೆಯಿಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಈಗಾಗಲೇ ಬಂಧಿತನಾಗಿರುವ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ ಪುಂಡಲೀಕ ತೋಳಂಬಿ ಎಂಬವರು ಪಿಲಿಚಂಡಿಕಲ್ಲು ವಾಸ್ತವ್ಯವಿದ್ದ ಮನೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಪ್ರಿಂಟರ್, ದ್ರಾವಣ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಡೆಂಜ ಎಂಬಲ್ಲಿ ಇದ್ರೀಸ್ ಎಂಬವರ ಒಡೆತನದ ಮನೆಯೊಂದರಲ್ಲಿ ಖೋಟಾ ನೋಟು ಮುದ್ರಣ ಜಾಲವೊಂದನ್ನು ಜು. ೧೬ ರಂದು ಪೊಲೀಸರು ಪತ್ತೆ ಹಚ್ಚಿ ಖೋಟಾ ನೋಟುಗಳು ಮತ್ತು ನೋಟು ಮುದ್ರಣಕ್ಕೆ ಸಂಬಂಧಿಸಿದ ಯಂತ್ರ, ಪರಿಕರಗಳನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರೆಸುತ್ತಿದ್ದಂತೆಯೇ ಹೆಚ್ಚುವರಿ ಮಾಹಿತಿಗಳು ಅನಾವರಣಗೊಳ್ಳತೊಡಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪುತ್ತೂರು ಕಸಬಾ ಗ್ರಾಮದ ಇಬ್ರಾಹೀಂ (೬೦), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ (೫೧), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ ಪುಂಡಲೀಕ ಶೋಳಂಬಿ (೩೦), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ನಬಾಸ್ (೩೭), ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್ (೨೫), ಉರುವಾಲು ಗ್ರಾಮದ ಸಿರಾಜುದ್ದೀನ್ (೩೪), ಪುತ್ತಿಲ ಗ್ರಾಮದ ಇರ್ಷಾದ್ (೩೧) ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಲ್ಲಿ ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಉತ್ತರ ಕನ್ನಡ ಜಿಲ್ಲೆಯ ಸಂದೀಪ ಪುಂಡಲೀಕ ಶೋಳಂಬಿ, ಉರುವಾಲು ಗ್ರಾಮದ ಸಿರಾಜುದ್ದೀನ್, ಪುತ್ತಿಲ ಗ್ರಾಮದ ಇರ್ಷಾದ್ ಎಂಬವರನ್ನು ಜು.೨೬ರವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇನ್ನುಳಿದ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ನಬಾಸ್, ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್, ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ್ ಅವರಿಗೆ ಆ.೧ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಇಂದು ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರಿಗೆ ಜು.೨೬ರಂದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಈ ನಡುವೆ ತಲೆ ಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಮತ್ತು ಪೊಲೀಸ್ ವಶದಲ್ಲಿರುವ ಸಂದೀಪ ಪುಂಡಲಿಕ ವಾಸ್ತವ್ಯವಿದ್ದ ಕುವೆಟ್ಟು ಗ್ರಾಮದ ವಸತಿ ಕಟ್ಟಡದಲ್ಲಿ ಶೋಧ ಕಾರ್ಯಾಚರಣೆಗೆ ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ಶೋಧನೆ ನಡೆಸಲಾಗಿದೆ. ಈ ವೇಳೆ ಆರೋಪಿ ಸಂದೀಪ ಪುಂಡಲಿಕ ವಾಸ್ತವ್ಯವಿದ್ದ ಮನೆಯಲ್ಲಿ ಪ್ರಿಂಟರ್, ದ್ರಾವಣದ ಬಾಟ್ಲಿ ಮತ್ತಿತರ ಸೊತ್ತುಗಳು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
































