
ಪುತ್ತೂರು: ಕೃಷಿ ರಕ್ಷಣೆ ಮತ್ತು ಆತ್ಮರಕ್ಷಣೆಯ ಹಿನ್ನಲೆಯಲ್ಲಿ ಕೋವಿ, ರಿವಾಲ್ವರ್ ಮುಂತಾದ ಆಯುಧಗಳ ನವೀಕರಣ ಅರ್ಜಿಗಳಿಗೆ ಪರವಾನಿಗೆ ನೀಡುವ ಕುರಿತು ಶೀಘ್ರ ಕ್ರಮಕೈಗೊಳ್ಳುವಂತೆ ರಾಜ್ಯದ ಗೃಹಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗೃಹಸಚಿವರನ್ನು ಭೇಟಿ ಮಾಡಿದ ಶಾಸಕರು ರೈತರು ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಕೋವಿ, ರಿವಾಲ್ವರ್ ಇತ್ಯಾದಿ) ಹೊಂದಿದ್ದಾರೆ. ಇದು ಕಾಲ ಕಾಲಕ್ಕೆ ಕ್ರಿಮಿನಲ್ ಕೇಸ್ ರಹಿತರಿಗೆ ಸುಗಮವಾಗಿ ನವೀಕರಣಗೊಳ್ಳುತ್ತಿತ್ತು. ಪರವಾನಿಗೆದಾರರಿಗೆ ವಯಸ್ಸಾದಾಗ ಅಥವಾ ಮೃತ ಪಟ್ಟಲ್ಲಿ ಅವರ ವಾರೀಸುದಾರ ಅರ್ಜಿ ಸಲ್ಲಿಸಿದಲ್ಲಿ ವರ್ಗಾವಣೆಯಾಗುತ್ತಿತ್ತು. ಇನ್ನು ಕೆಲವರು ಹೊಸ ಪರವಾನಿಗೆಗೆ ಅರ್ಜಿ ಸಲ್ಲಿಸಿ ಮಂಜೂರಾಗಿ ಆಯುಧಗಳನ್ನು ಹೊಂದುತ್ತಿದ್ದರು. ಇಂತಹ ಸುಗಮವಾದ ವ್ಯವಸ್ಥೆ ೨೦೨೫ರ ಮೇ ತಿಂಗಳುಗಳವರೆಗೆ ರೂಢಿಯಿಂದ ನಡೆದು ಬರುತ್ತಿತ್ತು. ಜೂನ್ ೨೦೨೫ ರಿಂದ ಈ ಕುರಿತು ಯಾವುದೇ ಕಾನೂನು ಮತ್ತು ನಿಯಮ ಬದಲಾಗದಿದ್ದರೂ ಲೈಸನ್ಸಿಂಗ್ ವ್ಯವಸ್ಥೆ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿ ಪರವಾನಿಗೆದಾರರಿಗೆ ತೊಂದರೆ ನೀಡುತ್ತಿದೆ. ಆದ್ದರಿಂದ ಸದರಿ ನವೀಕರಣದ ಬಗ್ಗೆ ಪರವಾನಿಗೆ ನೀಡುವ ಕುರಿತು ಇಲಾಖೆಗೆ ಆದೇಶಿಸುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ.
ಕೋವಿ ಪರವಾನಿಗೆ ನವೀಕರಣ ವಿಚಾರದಲ್ಲಿ ಈ ಹಿಂದೆ ಗೃಹ ಸಚಿವರಾಗಿದ್ದ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಮಾಡಿದ್ದೆ, ಇದೇ ವಿಚಾರವನ್ನು ಸದನದ ಅಧಿವೇಶನದಲ್ಲಿಯೂ ಸರ್ಕಾರದ ಗಮನ ಸೆಳೆದಿದ್ದೆ. ದ ಕ ಜಿಲ್ಲೆಯಲ್ಲಿ ಈಗಾಗಲೇ ಕೋವಿ ಪರವಾನಿಗೆ ಪಡೆದಿರುವ ರೈತರ ಕೋವಿ ಪರವಾನಿಗೆಯನ್ನು ನವೀಕರಣ ಮಾಡುವಲ್ಲಿರುವ ಲೋಪಗಳನ್ನು ಸರಿಪಡಿಸಿ ಕ್ರಮಕೈಗೊಳ್ಳುವಂತೆ ಸಚಿವರಲ್ಲಿ ಆಗ್ರಹಿಸಿದ್ದೇನೆ. ಶೀಘ್ರ ಕ್ರಮದ ಭರವಸೆಯೂ ಇದೆ– ಅಶೋಕ್ ರೈ ಶಾಸಕರು ಪುತ್ತೂರು.


































