
ಸಂಜೆವಾಣಿ ನ್ಯೂಸ್
ಮೈಸೂರು:ಅ.14:- ಕಲೆ, ಸಾಹಿತ್ಯ ಹಾಗೂ ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿದ ಭಾರತ ಅತ್ಯಂತ ಶ್ರೀಮಂತ ರಾಷ್ಟ್ರ ಎಂದು ಖ್ಯಾತ ಚಲನಚಿತ್ರ ನಟ ಡಾ. ಮುಖ್ಯಮಂತ್ರಿ ಚಂದ್ರು ಬಣ್ಣಿಸಿದರು.
ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಾಸ್ಯ ಮತ್ತು ಚುಟುಕು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಸಾಹಿತ್ಯ ಲೋಕಕ್ಕೆ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತ್ರಿಪದಿ ಮೂಲಕ ಚುಟುಕು ಸಾಹಿತ್ಯ ಹುಟ್ಟಿದ್ದು, ಡಿ.ವಿ. ಗುಂಡಪ್ಪ, ದಿನಕರ ದೇಸಾಯಿ ಮತ್ತು ರಾಜರತ್ನಂ ಅವರ ಸಾಹಿತ್ಯದಲ್ಲೂ ಚುಟುಕು ಸಾಹಿತ್ಯವನ್ನು ಕಾಣಬಹುದು ಎಂದು ಹೇಳಿದರು. ನಂತರ ನೂರು ವರ್ಷ ಬದುಕಿದ ಮನುಷ್ಯ, ಹೆಣವಾಗಿ ಮೂರು ದಿನವೂ ಇರಲ್ಲ ಎಂಬ ಚುಟುಕು ಕವನವನ್ನು ವಾಚಿಸಿದರು.
ಕವಿಗೋಷ್ಠಿಯಲ್ಲಿ ಕವಿಗಳು ನಗೆ ಚಟಾಕಿ ಹಾರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಬಳ್ಳಾರಿ ಮೂಲದ ಶಿಕ್ಷಕ ಎ. ಎರ್ರಿಸ್ವಾಮಿ ಅವರು ಕನ್ನಡಿಗರ ಉಸಿರು ಕನ್ನಡ ಅಂದ್ರು, ಕನ್ನಡ ಚೂಡಾಮಣಿ ಮುಖ್ಯಮಂತ್ರಿ ಚಂದ್ರು ಎಂಬ ಚುಟುಕು ವಾಚಿಸಿದಾಗ ಸಭಾಂಗಣದಲ್ಲಿ ನಗು ಮುಗಿಲುಮುಟ್ಟಿತು. ಎಲ್ಲಿದ್ದರೇನು ಸ್ವರ್ಗ ನರಕಗಳು, ನರಕಕ್ಕೆ ಇರುವ ನೂಕು ನುಗ್ಗಲು ಸ್ವರ್ಗಕ್ಕಿಲ್ಲ, ಆಧುನಿಕ ಪುರುಷರು ನಗಲಾರರು ಆಧಾರ್ ಕಾರ್ಡ್ ಫೆÇೀಟೋದಂತೆ ಎಂಬ ಸಾಲುಗಳಿಗೆ ಸಭಿಕರು ಚಪ್ಪಾಳೆ ತಟ್ಟಿದರು.
ಬೆಳಗಾವಿ ಮೂಲದ ಮಕ್ಕಳ ತಜ್ಞ ಡಾ. ಶೈಲಜ ನಾಗಪ್ಪ ಮಾದಣ್ಣನವರ್ ಅವರು ಬಿಳಿ ಕೂದಲು ಶೀರ್ಷಿಕೆಯಲ್ಲಿ ಓ ನನ್ನ ಮುದ್ದು ಹೆಂಡತಿ, ಬೆಳ್ಳಗಾಗಿವೆ ತಲೆ ಕೂದಲು, ನೋಡಿ ನಕ್ಕವರಲ್ಲಿ ನೀನೆ ಮೊದಲು, ನಿನ್ನ ಪ್ರೀತಿಯಲ್ಲಿ ಚಿಗುರಿ ನಿಂತಿವೆ ಮಾಗಿ ಫಸಲು ಎಂಬ ಚುಟುಕು ವಾಚಿಸಿದಾಗ ಸಭಿಕರು ಶಿಳ್ಳೆ ಹಾಕಿ ಸಂಭ್ರಮಿಸಿದರು. ಸನಾವುಲ್ಲಾ ಡಿ. ನವಿಲೇಹಾಳು ಅವರು ಉಪವಾಸ ಎಂದರೆ ಹೊಟ್ಟೆ ಹಸಿವಿನಿಂದ ಇರುವುದಲ್ಲ, ಮತ್ತೊಬ್ಬರ ಹಸಿವಿನ ಬಗ್ಗೆ ತಿಳಿಯುವುದು ಎಂಬ ಚುಟುಕನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಲೇಖಕಿ ಡಾ. ಎಚ್.ಆರ್. ಸುಜಾತ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಸ್ಯ ಕವಿಗಳಾದ ರಿಚರ್ಡ್ ಲೂಯಿಸ್, ಮೈಸೂರು ಆನಂದ್, ಕಿರ್ಲೋಸ್ಕರ್ ಸೇರಿದಂತೆ ಅನೇಕ ಕವಿಗಳು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

























