
ಕಾರವಾರ : ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಜಿಲ್ಲೆಯಲ್ಲಿ ಜೂನ್ ೩೦ ಮಧ್ಯಾಹ್ನ ೧ ಗಂಟೆಯಿಂದ ಜುಲೈ ೨ ರ ಬೆಳಗ್ಗೆ ೮.೩೦ ರ ವರೆಗೆ ಆರೆಂಜ್ ಅಲರ್ಟ್ ಇದ್ದು ೩೦-೪೦ ಕಿ.ಮೀ ಗಾಳಿಯ ವೇಗದೊಂದಿಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆಯನ್ನು ಈಗಾಗಲೇ ಕೈಗೊಂಡಿರುತ್ತದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಜಿಲ್ಲೆಯ ಹವಾಮಾನ ಪರಿಸ್ಥಿತಿಯ ಕುರಿತಂತೆ ವರದಿಗಳನ್ನು ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸಬಹುದಾಗಿರುತ್ತದೆ. ಜೂ ೩೦ ರತನಕ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗದಂತೆ ಸೂಚಿಸಲಾಗಿದೆ. ತಹಶೀಲ್ದಾರರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಶ್ರಯ ಪಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾಲುಸಂಕ, ಕಿರು ಸೇತುವೆ ಇತ್ಯಾದಿಗಳನ್ನು ದಾಟುವ ಮುನ್ನ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸಂಖ್ಯೆ ೦೮೩೮೨-೨೨೯೮೫೭ ಗೆ ಅಥವಾ ವಾಟ್ಸಪ್ ನಂ: ೯೪೮೩೫೧೧೦೧೫ ಅಥವಾ ಆಯಾ ತಾಲೂಕಾ ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ಕರಾವಳಿಯಲ್ಲಿ ಮುಂದುವರಿದ ಮಳೆರಾಯ : ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಉತ್ತಮ ಮಳೆಯಾಗಿದೆ. ಹೊನ್ನಾವರದ ವ್ಯಾಪ್ತಿಯಲ್ಲಿ ೧೦೧ ಮಿಲಿ ಮೀಟರ್ , ಮಳೆ ಸುರಿದಿದೆ. ಅಂಕೋಲಾದಲ್ಲಿ ೭೦ ಭಟ್ಕಳದಲ್ಲಿ ೧೧, ಕಾರವಾರ ೭೮, ಕುಮಟಾದಲ್ಲಿ ೭೮, ಸಿದ್ದಾಪುರ ೫೪ , ಶಿರಸಿ ೧೮, ದಾಂಡೇಲಿಯಲ್ಲಿ ೨೮ ಮಿಲಿ ಮೀಟರ್ ಮಳೆ ಸುರಿದಿದೆ. ಜು.ಒಂದರ ತನಕ ಆರೆಂಜ್ ಅಲರ್ಟ ಘೋಷಿಸಲಾಗಿದೆ. ಮಳೆ ಕರಾವಳಿಯಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


































