Home ಜಿಲ್ಲೆ ಮಂಗಳೂರು ಅಮೃತ್ ೨ ಯೋಜನೆಗೆ ಅಗೆದ ರಸ್ತೆಯ ಕಾಂಕ್ರೀಟಿಕರಣ ಕಳಪೆ; ರಸ್ತೆ ಅಗೆದು ಮರು ಕಾಂಕ್ರೀಟೀಕರಣಕ್ಕೆ ಇಂಜಿನಿಯರ್...

ಅಮೃತ್ ೨ ಯೋಜನೆಗೆ ಅಗೆದ ರಸ್ತೆಯ ಕಾಂಕ್ರೀಟಿಕರಣ ಕಳಪೆ; ರಸ್ತೆ ಅಗೆದು ಮರು ಕಾಂಕ್ರೀಟೀಕರಣಕ್ಕೆ ಇಂಜಿನಿಯರ್ ಸೂಚನೆ

ಸುಳ್ಯ:ಅಮೃತ್ ೨ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಅಗೆದ ರಸ್ತೆಯ ಕಾಂಕ್ರೀಟಿಕರಣ ಕಳಪೆ ಕಳಪೆ ಆಗಿದೆ ಎಂದು ಅದಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮರು ಕಾಂಕ್ರೀಟಿಕರಣ ಮಾಡಲು ಸೂಚನೆ ನೀಡಿದ ಘಟನೆ ನಡೆದಿದೆ.
ಸುಳ್ಯ ಕುರುಂಜಿಗುಡ್ಡೆಗೆ ಹೋಗುವ ಕೋರ್ಟ್ ಬಳಿಯ ರಸ್ತೆ ಅಮೃತ್ ೨ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸಂದರ್ಭ ಹಾಕಿದ ಕಾಂಕ್ರೀಟ್ ಒಡೆದು ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಪರಿಣಾಮ ಅದನ್ನು ಸರಿ ಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಮೇರೆಗೆ ಇದೀಗ ಆ ರಸ್ತೆಯ ಮರು ಕಾಂಕ್ರೀಟೀಕರಣ ನಡೆಯುತ್ತಿತ್ತು. ಆದರೆ ಎರಡನೇ ಬಾರಿ ಕೂಡ ಮಾಡಿದ ಕಾಮಗಾರಿ ಕಳಪೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಹಾಕಿದ ಕಾಂಕ್ರೀಟ್ ಅಗೆದು ಮರು ಕಾಂಕ್ರೀಟ್ ಮಾಡುವಂತೆ ಸೂಚಿಸಿದ್ದಾರೆ.
ಸುಳ್ಯದ ಕೋರ್ಟ್ ಪಕ್ಕದ ರಸ್ತೆಯಲ್ಲಿ ಅಮೃತ್ ೨ ಯೋಜನೆಯ ಪೈಪ್ ಕಾಮಗಾರಿ ಗೆ ರಸ್ತೆ ಅಗೆಯಲಾಗಿತ್ತು. ಪೈಪ್ ಅಳವಡಿಕೆ ಬಳಿಕ ಮತ್ತೆ ಕಾಂಕ್ರೀಟ್ ಹಾಕಲಾಗಿದ್ದು ೬ ತಿಂಗಳಲ್ಲಿ ಈ ರಸ್ತೆ ಒಡೆದು ಸಂಚಾರ ದುಸ್ತರ ವೆನಿಸಿತ್ತು. ಬಳಿಕ ನಗರ ಪಂಚಾಯಿತಿ ಅಧಿಕಾರಿಗಳಿಗೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ದೂರು ಹೋಗಿ ಅವರು ಅಮೃತ್ ೨ ಯೋಜನೆಯ ಕಾಮಗಾರಿ ಉಸ್ತುವಾರಿ ವಹಿಸಿದ ಇಂಜಿನಿಯರ್‌ರಿಗೆ ಕರೆ ಮಾಡಿ ರಸ್ತೆ ದುರಸ್ತಿ ಮಾಡುವಂತೆ ಸೂಚಿಸಿದರು. ಇದರ ಪರಿಣಾಮ ಜೂ.೩ರಂದು ಸಂಜೆ ಕೋರ್ಟ್ ರಸ್ತೆ ಅಗೆಯಲು ಪ್ರಾರಂಭಿಸಲಾಯಿತು. ಜೂ.೫ರಂದು ಸಂಜೆ ಕಾಂಕ್ರೀಟ್ ಅರ್ಧ ಹಾಕಲಾಯಿತು. ಆದರೆ ಹಾಕಲಾದ ಕಾಂಕ್ರೀಟ್‌ನಲ್ಲಿ ಜಲ್ಲಿ ಇಲ್ಲ, ಬರೇ ಸಿಮೆಂಟ್ ಮಿಕ್ಸ್ ಹಾಕಲಾಗಿದೆ ಎಂದು ಊರವರು ಆರೋಪಿಸಿದರಲ್ಲದೆ, ನ.ಪಂ. ಇಂಜಿನಿಯರ್‌ರಿಗೆ ದೂರು ನೀಡಿದರು. ಜೂ.೬ರಂದು ಶನಿವಾರ ಮುಂಜಾನೆ ನ.ಪಂ. ಇಂಜಿನಿಯರ್ ಮತ್ತು ಊರವರು ಸ್ಥಳಕ್ಕೆ ಬಂದು ನ.ಪಂ. ಇಂಜಿನಿಯರ್ ಎದುರು ರಸ್ತೆ ಅಗೆದರು. ಅದರಲ್ಲಿ ಕಾಂಕ್ರೀಟ್‌ಗೆ ಬೇಕಾದಷ್ಟು ಪ್ರಮಾಣದ ಜಲ್ಲಿ ಹಾಕದಿರುವುದು ಕಂಡು ಬಂತು. ಬಳಿಕ ರಸ್ತೆ ಕಾಮಗಾರಿ ಮಾಡುತಿದ್ದವರಿಗೆ ರಸ್ತೆ ಅಗೆದು ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ಇಂಜಿನಿಯರ್ ಸೂಚನೆ ಸೂಚಿಸಿದರು.
ಆದರೆ ಸ್ಥಳಕ್ಕೆ ಗುತ್ತಿಗೆದಾರರು ಬಂದಿರಲಿಲ್ಲ. ಅವರನ್ನು ದೂರವಾಣಿ ಮೂಲಕ ಸಂರ್ಪಕಿಸಲಾಯಿತು. “ಈಗ ಮಾಡಲಾದ ರಸ್ತೆಯನ್ನು ಅಗೆದು ಸಮರ್ಪಕವಾಗಿ ಕೆಲಸ ಮಾಡಲಾಗುವುದು. ಅದಕ್ಕೆ ರಸ್ತೆ ಕೆಲ ದಿನ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ” ಎಂದು ಗುತ್ತಿಗೆದಾರ ನಿಸಾರ್ ತಿಳಿಸಿದ್ದಾರೆ.