Home ಜಿಲ್ಲೆ ಮಂಗಳೂರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಸರ್ಕಾರದ ವೈಫಲ್ಯ ಭಜನೆ-ಭಾಷಣಗಳ ಮೂಲಕ ಶೋಕಾಚರಣೆ

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಸರ್ಕಾರದ ವೈಫಲ್ಯ ಭಜನೆ-ಭಾಷಣಗಳ ಮೂಲಕ ಶೋಕಾಚರಣೆ

ಪುತ್ತೂರು: ವಾಲ್ಮೀಕಿ ನಿಗಮ ಲೂಟಿಯ ರೂವಾರಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ, ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಶುಕ್ರವಾರ ಮಿನಿ ವಿಧಾನಸೌಧದ ಎದುರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಮೂರು ವರ್ಷದ ಹಿಂದೆ ಸ್ಥಾಪನೆಯಾದ ಭ್ರಷ್ಟ ಸರಕಾರದಲ್ಲಿ ಭ್ರಷ್ಟ ಸಚಿವರೇ ತುಂಬಿದ್ದಾರೆ. ದಲಿತ ಕಾರ್ಡ್ ಉಪಯೋಗ ಮಾಡಿಕೊಂಡು ೧೮೭ ಕೋಟಿ ಹಣ ಬೇರೆ ಖಾತೆಗೆ ಹೋಗಿದೆ. ಇದನ್ನು ಆಗಿನ ಮುಖ್ಯ ಮಂತ್ರಿಯವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವೇ ನಾಟಕ ಪಕ್ಷವಾಗಿದೆ ಎಂದು ಆರೋಪಿಸಿದರು.
ರಾಷ್ಟ್ರಪ್ರೇಮದ ಗೀತೆ ವಂದೇ ಮಾತರಂಗೆ ಅಡ್ಡ ಹಾಕಿದ್ದೀರಿ, ನಿಮ್ಮ ಪಕ್ಷಕ್ಕೆ ದೇಶ ಸಂವಿಧಾನಕ್ಕೆ ಗೌರವ ಇಲ್ಲ. ಚಾಮರಾಜ ನಗರ ದಲ್ಲಿ ನಾಗರೀಕರನ್ನು ಎನ್‌ಕೌಂಟರ್ ಮಾಡಿದ್ದೀರಿ ಎಂದು ಆರೋಪಿಸಿದ ಯತೀಶ್, ಪುತ್ತೂರು ಶಾಸಕರು ಸುಳ್ಳು ಅಭಿವೃದ್ಧಿ ಮಾತು ಹೇಳಿ ನಾಟಕ ಮಾಡುತ್ತಿದ್ದಾರೆ. ನಿಮಗೆ ದಾಖಲೆ ಬಿಡುಗಡೆ ಮಾಡುವ ಧೈರ್ಯ ಇದ್ದರೆ ಪುತ್ತೂರು, ವಿಟ್ಲದಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಶಾಸಕರು ರೀಲ್ಸ್ ಮಾಡುವ ಅಭ್ಯಾಸವಿದ್ದರೆ ನಾಗೇಂದ್ರರನ್ನು ಸಚಿವ ಮಾಡಿದ್ದೇವೆ ಎಂದು ರೀಲ್ಸ್ ಮಾಡಿ ಎಂದು ವ್ಯಂಗ್ಯವಾಡಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಮಾತನಾಡಿ, ಜನರಿಗೆ ಡಿಕೆಶಿ ಅಧಿಕಾರದಲ್ಲಿ ನಂಬಿಕೆ ಇತ್ತು. ಆದರೆ ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿ ಅದನ್ನು ಕಳೆದುಕೊಂಡಿದ್ದಾರೆ. ನಾಗೇಂದ್ರ ರಾಜೀನಾಮೆ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಸಚಿವ ಸ್ಥಾನದಿಂದ ತೆಗೆದು ಹಾಕಿ ಜನರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ನಿಗಮದ ಹಣವನ್ನು ಹೈಕಮಾಂಡ್‌ಗೆ ಸಮರ್ಪಣೆ ಮಾಡಿದ ಭ್ರಷ್ಟಾಚಾರ ನಡೆದುದರಿಂದಲೇ ರಾಜೀನಾಮೆ ಕೊಟ್ಟಿದ್ದರು. ಈಗ ರಾಜ್ಯದಮುಖ್ಯ ಮಂತ್ರಿ ಬದಲಾವಣೆ ಆದಾಗ ಹಣ ಮಾಡಿ ಕೊಡುವವರನ್ನು ಮಂತ್ರಿ ಮಾಡಿದ್ದಾರೆ. ನಮ್ಮ ವಿಧಾನಸಭಾ ಕ್ಷೇತ್ರದಲ್ಲೂ ಭ್ರಷ್ಟಚಾರ ನಡೆದಿದೆ. ಪುತ್ತೂರಿನ ಗುತ್ತಿಗೆದಾರು ಕೆಲಸ ಇಲ್ಲದೆ ಇದ್ದಾರೆ. ಬೇರೆಯವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಅಧಿಕಾರಿಗಳು ಕೂಡ ಭ್ರಷ್ಟಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಮುಖಂಡರಾದ ಬೂಡಿಯಾರು ರಾಧಾಕೃಷ್ಣ ರೈ, ಹರೀಶ್ ಬಿಜತ್ರೆ, ಜಿಲ್ಲಾ ಉಪಾಧ್ಯಕ್ಷ ಹಾಗೂ ಪುತ್ತೂರು ಮಂಡಲ ಪ್ರಭಾರಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ರಫೀಕ್ ದರ್ಬೆ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಮಾತನಾಡಿದರು.
ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ, ಪ್ರಮುಖರು ಹಾಗೂ ಪದಾಧಿಕಾರಿಗಳಾದ ಶಿವಕುಮಾರ್ ಕಲ್ಲಿಮಾರು, ಸಹಜ ರೈ ಬಳೆಜ್ಜ, ಜೀವಂಧರ್ ಜೈನ್, ರಾಮಣ್ಣ ಗುಂಡೋಳೆ, ರಾಮಚಂದ್ರ ಪೂಜಾರಿ, ಯು. ಲೋಕೇಶ್ ಹೆಗ್ಡೆ, ಡಾ. ಕೃಷ್ಣ ಪ್ರಸನ್ನ, ಕೃಷ್ಣ ಕುಮಾರ್ ರೈ ಕೆದಂಬಾಡಿ, ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ್ ಮುಂಗ್ಲಿಮನೆ, ಅಶೋಕ್ ಶೆಟ್ಟಿ ವಿಟ್ಲ, ಸತೀಶ್ ನಾಕ್, ವಿದ್ಯಾಧರ್ ಜೈನ್, ಮುಕುಂದ, ಸುಂದರ ಪೂಜಾರಿ ಬಡಾವು, ವಿನಯ ಭಂಡಾರಿ, ವಿಜಯ ಬಿ.ಎಸ್., ಸಂತೋಷ ರೈ ಕೈಕಾರ, ರಾಜೇಶ್ ರೈ ಪರ್ಪುಂಜ, ವಿಶ್ವನಾಥ ಗೌಡ, ಯುವರಾಜ್ ಪೆರಿಯತ್ತೂಡಿ, ಲಕ್ಷ್ಮಣ ಬೆಳ್ಳಿಪ್ಪಾಡಿ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ದಿವ್ಯಾ ಪುರುಷೋತ್ತಮ, ಗೌರಿ ಬನ್ನೂರು, ಚಿತ್ರ ಅಂಕೋತ್ತಿಮಾರು, ಯಶೋದಾ, ಇಂದಿರಾ ಆಚಾರ್ಯ, ವಿರೂಪಕ್ಷ ಭಟ್, ಅಪ್ಪಯ್ಯ ಮಣಿಯಾಣಿ ಮೊದಲಾದವರಿದ್ದರು. ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಸುನಿಲ್ ದಡ್ದು ಸ್ವಾಗತಿಸಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ವಂದಿಸಿದರು. ಲೋಕೇಶ್ ಚಾಕೋಟೆ ಕಾರ್ಯಕ್ರಮ ನಿರ್ವಹಿಸಿದರು.
ಭಜನೆ, ಮನವಿ
ಪ್ರತಿಭಟನೆಯ ಸಂದರ್ಭದಲ್ಲಿ ಭಜನೆ ಹಾಕುವ ಮೂಲಕ ರಾಜ್ಯ ಸರ್ಕಾರದ ವೈಫಲ್ಯಗಳಿಗೆ ಶೋಕ ಸಲ್ಲಿಸಲಾಯಿತು. ಬಳಿಕ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.