
ಹಾನಗಲ್ ಕುಮಾರ ಶಿವಯೋಗಿಗಳು ಮತ್ತು ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಜನರಲ್ಲಿ ಧರ್ಮಜಾಗೃತಿಯನ್ನು ಬೆಳೆಸುವುದರ ಜೊತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು 1916ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು. ಪ್ರಾರಂಭದಲ್ಲಿ ವಿಶ್ರಾಂತಿ ನಿಲಯ, ನಂತರ ವಿದ್ಯಾರ್ಥಿ ಪ್ರಸಾದ ನಿಲಯ ಸ್ಥಾಪಿಸಿಲಾಯಿತು.ನಂತರ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿಸಲಾಯಿತು.
1906ರಲ್ಲಿ ಧರ್ಮಾರ್ಥಕಾರ್ಯಕ್ಕಾಗಿ ಹೀರದ ಸೂಗಮ್ಮನವರು ನಗರದ ಗಣೇಶಗುಡಿ ಬೀದಿಯಲ್ಲಿ ಚೌಕಿಯೊಂದನ್ನು ಪ್ರಾರಂಭಿಸಿದ್ದರು. ಸದರಿ ಚೌಕಿಯಲ್ಲಿ ದಿನಾಂಕ:04-04-1924ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘವು ಸಂಸ್ಕೃತ ಪಾಠಶಾಲೆಯನ್ನು ಸ್ಥಳಾಂತರಿಸುವುದರ ಜೊತೆಗೆ “ವೀರಶೈವ ಸ್ಕೂಲ್” ತೆರೆಯಲಾಯಿತು. ನಂತರ ಸದರಿ ಶಾಲೆಯನ್ನು ಹೀರದ ಸೂಗಮ್ಮ ಎಲಿಮೆಂಟರಿ ಬೇಸಿಕ್ ಶಾಲೆ ಎಂದು ಮರುನಾಮಕರಣ ಮಾಡಲಾಯಿತು. ಸ್ವಾತಂತ್ರ್ಯ ನಂತರ 1956ರಲ್ಲಿ ಹೀರದ ಸೂಗಮ್ಮ ಬೇಸಿಕ್ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಈಗ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ವೀ.ವಿ.ಸಂಘವು ಅನೇಕ ಶಾಲಾ ಕಾಲೇಜುಗಳನ್ನು ಹೊಂದಿದೆ.
ಆಗ ನಗರದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳು ಇಲ್ಲದಕಾರಣ ನಗರದ ಸುತ್ತಮುತ್ತಲು ಹತ್ತು-ಹದಿನೈದು ಕಿಲೋ ಮೀಟರ್ ದೂರದ ಹಳ್ಳಿಗಳಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಈವರೆಗೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಈ ಶಾಲೆ ಅನುದಾನಿತ ಶಾಲೆಯಾಗಿದೆ.
ಇಲಿ ಅಭ್ಯಾಸ ಮಾಡಿದ ಅನೇಕರು ಆರೋಗ್ಯ, ತಾಂತ್ರಿಕ, ನ್ಯಾಯಾಂಗ, ಮಾಧ್ಯಮ. ಶಿಕ್ಷಣ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಎಲ್ಲೆಡೆ ಶಾಲೆಗಳು ಆರಂಭವಾದ ಮೇಲೆ ಸುತ್ತಮುತ್ತಲಿನ ಬಡ ಮಕ್ಕಳಿಗೆ ವಿದ್ಯೆ ನೀಡುತ್ತಿದೆ. ಶಾಲೆಯಲ್ಲಿ ಸೇವಾದಳ, ಸೌಟ್ಸ್ ಅಂಡ್ ಗೈಡ್ಸ್ ವಿಂಗ್ ಇವೆ. ಗಣೇಶಗುಡಿ ಬಳಿ ಇದ್ದ ಶಾಲೆಯನ್ನು 1995ರಲ್ಲಿ ಈನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗ ಕನ್ನಡ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 315 ವಿದ್ಯಾರ್ಥಿಗಳು ಇದ್ದಾರೆ. ಪಾಲಕ-ಪೋಷಕರಲ್ಲಿ ತಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕೆಂಬ ಆಸಕ್ತಿ ಹಿನ್ನೆಲೆಯಲ್ಲಿ 1999ರಲ್ಲಿ 1ರಿಂದ 5ನೇ ತರಗತಿವರೆಗೆ ಕರಡೀಶ ಶಿಶುವಿಹಾರ ಪ್ರಾರಂಭಿಸಲಾಯಿತು. 2013ರಲ್ಲಿ ಸದರಿ ಶಾಲೆಯನ್ನು 1 ರಿಂದ 7ನೇ ತರಗತಿಗೆ ಉನ್ನತೀಕರಿಸಲಾಯಿತು. ಪ್ರಸ್ತುತ ಸದರಿ ಶಾಲೆಯಲ್ಲಿ 251 ಮಕ್ಕಳಿದ್ದಾರೆ. 2012-13ರಲ್ಲಿ 8 ರಿಂದ 10ನೇ ತರಗತಿಯವರೆಗೆ ಹೀರದ ಸೂಗಮ್ಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯನ್ನು ಪ್ರಾರಂಭಿಸಲಾಯಿತು.ಈ ಶಾಲೆಯಲ್ಲಿ 258 ಮಕ್ಕಳಿದ್ದಾರೆ. ಒಟ್ಟು 824 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. 29 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಲೆಯ ಮಕ್ಕಳು ಸಾಂಸ್ಕೃತಿಕ ಮತ್ತುಕ್ರೀಡಾ ವಿಭಾಗದಲ್ಲಿ ಅನೇಕ ಹಂತಗಳಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪಡೆದಿದ್ದಾರೆ. ಅದರಲ್ಲೂ ಗುಂಡು ಎಸೆತದಲ್ಲಿ ಮತ್ತು ಓಟದಲ್ಲಿ ಮಕ್ಕಳು ಎರೆಡು ಬಾರಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದಾರೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶ್ರೀ ಚ.ಮ.ಗಂಗಾಧರಯ್ಯ ಅವರಿಗೆ ಶಿಕ್ಷಕರಿಗೆ ನೀಡುವ ಭಾರತ ಸರ್ಕಾರದ ರಾಷ್ಟ್ರಪ್ರಶಸ್ತಿ ಮತ್ತು ಶ್ರೀ ಹೆಚ್.ಎಂ.ವೀರಭದ್ರ ಶರ್ಮ ಇವರಿಗೆ ಕರ್ನಾಟಕ ಸರ್ಕಾರ ನೀಡುವರಾಜ್ಯ ಪ್ರಶಸ್ತಿ ದೊರೆತಿದೆ.
ಈಗ ಈ ಶಾಲೆಗೆ 102 ವರ್ಷಗಳು ಸಂದಿವೆ. ಈ ತಿಂಗಳ 8 ಮತ್ತು 9 ರಂದು ಎರೆಡು ದಿನಗಳ ಕಾಲ ಶಾಲೆಯ ಆವರಣದಲ್ಲಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿದೆ. ಶತಮಾನೋತ್ಸವದ ಸ್ಮರಣೆಗಾಗಿ ವೀರಶೈವ ವಿದ್ಯಾವರ್ಧಕ ಸಂಘದಿಂದ ಬಡ ಮಕ್ಕಳಿಗಾಗಿ ಉಚಿತ ವಸತಿ ನಿಲಯ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಮಾರಂಭದ ವೇಳೆ ಭೂಮಿ ಪೂಜೆ ನೆರವೇರಲಿದೆ.
ಶಾಲೆಯ ಅಭಿವೃದ್ಧಿಗೆ ದಾನಿಗಳ, ವೀರಶೈವ ವಿದ್ಯಾರ್ಧಕ ಸಂಘದ, ಸಿಬ್ಬಂದಿಯ ಶ್ರಮ, ಆಡಳಿತ ವರ್ಗದ ಸಹಕಾರ ಸದಾ ಸ್ಮರಣೀಯ.
ಎನ್.ವೀರಭದ್ರಗೌಡ
ಶಾಲೆಯ ಹಳೇ ವಿದ್ಯಾರ್ಥಿ.































