
ಸಂಜೆವಾಣಿ ನ್ಯೂಸ್
ಮೈಸೂರು.ಜೂ.14:- ಬೆಂಗಳೂರಿನ ವೈಟ್ಫೀಲ್ಡ್ನ ಝೀ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ಜೂ.8 ರಿಂದ 10ರವರೆಗೆ ನಡೆದ 26ನೇ ಜೂನಿಯರ್ ಮತ್ತು ಸಬ್-ಜೂನಿಯರ್ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ಶಿಪ್ 2026ರಲ್ಲಿ ಮೈಸೂರಿನ ಈಜುಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ.
ಮೈಸೂರಿನ ಪ್ರತಿಭಾನ್ವಿತ ಈಜುಪಟು ರುತ್ವ ಮೂರು ಚಿನ್ನದ ಪದಕಗಳನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ರುತ್ವ ಅವರು 50 ಮೀಟರ್ ಬಟರ್ಫ್ಲೈ, 100 ಮೀಟರ್ ಬಟರ್ಫ್ಲೈ ಹಾಗೂ 200 ಮೀಟರ್ ಇಂಡಿವಿಜುವಲ್ ಮೆಡ್ಲೆ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನೂ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಇದೇ ಚಾಂಪಿಯನ್ಶಿಪ್ನಲ್ಲಿ ಮೈಸೂರಿನ ಇನ್ನೋರ್ವ ಈಜುಪಟು ಮೋಹಿತ್ ಎಸ್.ಬಿ. ಕೂಡ ಅಮೋಘ ಪ್ರದರ್ಶನ ನೀಡಿದ್ದಾರೆ. ಮೋಹಿತ್ 50 ಮೀಟರ್ ಫ್ರೀಸ್ಟೈಲ್ನಲ್ಲಿ ಬೆಳ್ಳಿ ಪದಕ ಜಯಿಸಿದರೆ, 50 ಮೀಟರ್ ಮತ್ತು 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜಿಎಸ್ಎ ಪ್ರತಿಭೆಗಳ ಸಾಧನೆ:
ರುತ್ವ ಹಾಗೂ ಮೋಹಿತ್ ಎಸ್.ಬಿ. ಇಬ್ಬರೂ ಮೈಸೂರಿನ ಜೆ.ಪಿ.ನಗರದಲ್ಲಿರುವ ಜಿಎಸ್ಎ ಈಜುಕೊಳದ ಪ್ರತಿಭೆಗಳು. ಕಳೆದ ಹಲವು ವರ್ಷಗಳಿಂದ ಹಿರಿಯ ತರಬೇತುದಾರ ಪವನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.
“ರುತ್ವ ಮತ್ತು ಮೋಹಿತ್ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅಂಗವೈಕಲ್ಯವನ್ನು ಮೆಟ್ಟಿನಿಂತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಎಲ್ಲಾ ಕ್ರೀಡಾಪಟುಗಳಿಗೂ ಸ್ಫೂರ್ತಿ” ಎಂದು ತರಬೇತುದಾರ ಪವನ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಈಜುಪಟುಗಳ ಸಾಧನೆಗೆ ಜಿಎಸ್ಎ ಸಂಸ್ಥೆಯ ಪದಾಧಿಕಾರಿಗಳು, ತರಬೇತುದಾರರು ಹಾಗೂ ಪೆÇೀಷಕರು ಅಭಿನಂದನೆ ಸಲ್ಲಿಸಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳನ್ನು ಶೀಘ್ರದಲ್ಲೇ ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.





























