
ಜಮಖಂಡಿ: ಜೂ.14:ತಾಲೂಕಿನ ಸಾವಳಗಿ ಗ್ರಾಮದ ಇಂದ್ರಾನಗರ ಕಾಲೋನಿಯಲ್ಲಿ ಲಘು ವಾಹನಗಳ ಅಕ್ರಮ ಹಾಗೂ ನಿಯಂತ್ರಣರಹಿತ ಸಂಚಾರದಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೋನಿಯ ಕಿರಿದಾದ ರಸ್ತೆಯಲ್ಲಿ ಪರವಾನಗಿ ಇಲ್ಲದಿದ್ದರೂ ನಿತ್ಯ ನೂರಾರು ಲಘು ವಾಹನಗಳು ಸಂಚರಿಸುತ್ತಿದ್ದು, ವಾಹನ ಚಾಲಕರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಪಾದಚಾರಿಗಳು ಜೀವಭಯದಲ್ಲೇ ರಸ್ತೆ ಬಳಸುವಂತಾಗಿದೆ.
ವಾಹನಗಳ ಅತಿಯಾದ ಓಡಾಟದಿಂದ ರಸ್ತೆಗಳು ಹದಗೆಟ್ಟಿದ್ದು, ಕೆಲ ಮನೆಗಳಿಗೆ ಹಾನಿಯಾಗಿರುವುದಲ್ಲದೆ ಸಾರ್ವಜನಿಕ ಆಸ್ತಿಗೂ ನಷ್ಟ ಉಂಟಾಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
“ಈ ರಸ್ತೆ ಕಿರಿದಾಗಿದ್ದು, ಭಾರೀ ಹಾಗೂ ಲಘು ವಾಣಿಜ್ಯ ವಾಹನಗಳ ಸಂಚಾರಕ್ಕೆ ಸೂಕ್ತವಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳು ಓಡಾಡುತ್ತಿವೆ. ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅಕ್ರಮವಾಗಿ ಸಂಚರಿಸುವ ವಾಹನಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂದ್ರಾನಗರ ರಸ್ತೆಯಲ್ಲಿ ಲಘು ವಾಹನಗಳ ಸಂಚಾರವನ್ನು ನಿಷೇಧಿಸಿ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ರಕ್ಷಣೆ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
“ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಆರಂಭಿಸಲಾಗುವುದು. ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳ ಮೇಲಿದೆ” ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆದಿತ್ಯ ತಿಕೋಟಾ, ಶ್ರೀಶೈಲ್ ತಳವಾರ, ಗಣಪತಿ ತಳವಾರ, ದೀಪಕ ಗಾಯಕವಾಡ, ಮಂಜುನಾಥ ಮಾಂಗ, ಸ್ವರಾಜ್ ಮಾದರ, ರಾಕೇಶ್ ತಿಕೋಟಾ ಸೇರಿದಂತೆ ಮಹಿಳೆಯರು, ಯುವಕರು ಹಾಗೂ ಕಾಲೋನಿಯ ಅನೇಕ ನಿವಾಸಿಗಳು ಉಪಸ್ಥಿತರಿದ್ದರು.


























