Home Lead News ಶಾಂತಿ ಒಪ್ಪಂದ ಅನುಮಾನ

ಶಾಂತಿ ಒಪ್ಪಂದ ಅನುಮಾನ

ವಾಷಿಂಗ್ಟನ್, ಜೂ. ೧೪- ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಸಂಘರ್ಷದ ಒಪ್ಪಂದಕ್ಕೆ ಅಂಕಿತ ಹಾಕುವ ಕುರಿತು ಅನಿಶ್ಚಿತತೆ ತಲೆದೋರಿದೆ. ಇಂದು ಈ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಪ್ರಸ್ತಾಪವನ್ನು ಇರಾನ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಹೀಗಾಗಿ ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ವಿಚಾರದಲ್ಲಿ ಗೊಂದಲ ತಲೆದೋರಿದೆ.


ಕಳೆದ ೩ ತಿಂಗಳಿನಿಂದ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಯುದ್ಧಾಂತ್ಯಕ್ಕೆ ಸಹಿ ಹಾಕಲು ಎರಡು ದೇಶಗಳು ಮುಂದಾಗಿವೆ ಎಂದು ಈ ಮೊದಲು ಟ್ರಂಪ್ ಹೇಳಿಕೆ ನೀಡಿದ್ದರು.


ಈ ಒಪ್ಪಂದಕ್ಕೆ ತೆರೆ ಬೀಳುತ್ತಿದ್ದಂತೆ ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ರಂಪ್ ಹೇಳಿದ್ದರು. ಈ ಸಂಬಂಧ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿದ್ದರೂ ಇಂದು ಮುದ್ರೆ ಬೀಳುವುದು ಅನುಮಾನವಾಗಿದೆ. ಸಾಮಾಜಿಕ ಮಾಧ್ಯಮ ‘ಟ್ರುತ್ ಸೋಶಿಯಲ್’ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಡೊನಾಲ್ಡ್ ಟ್ರಂಪ್, ಈ ಒಪ್ಪಂದವು ಇರಾನ್ ಯಾವುದೇ ರೂಪದಲ್ಲಿ (ಖರೀದಿ, ಅಭಿವೃದ್ಧಿ ಅಥವಾ ಸಾಗಣೆ) ಅಣ್ವಸ್ತ್ರಗಳನ್ನು ಹೊಂದದಂತೆ ತಡೆಯಲು “ಅಣ್ವಸ್ತ್ರ ರಹಿತ ಭದ್ರತಾ ಗೋಡೆ”ಯಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.”


ಮಧ್ಯಪ್ರಾಚ್ಯದ ಸುದೀರ್ಘ ಭವಿಷ್ಯಕ್ಕಾಗಿ ನಾವು ಇರಾನ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಒಂದು ವೇಳೆ ಈ ರಾಜತಾಂತ್ರಿಕ ಪ್ರಕ್ರಿಯೆ ವಿಫಲವಾದರೆ, ನಮ್ಮ ಬಳಿ ‘ಅಂತಿಮ ಪರ್ಯಾಯ ಮಾರ್ಗ ಮಿಲಿಟರಿ ದಾಳಿಗೆ ಸಿದ್ಧವಿದೆ” ಎಂದು ಟ್ರಂಪ್ ಎಚ್ಚರಿಕೆಯನ್ನೂ ನೀಡಿದ್ದಾರೆ.


೨೦೧೫ ರ ಒಬಾಮಾ ಆಡಳಿತದ ಇರಾನ್ ಅಣ್ವಸ್ತ್ರ ಒಪ್ಪಂದವನ್ನು ಕಟುವಾಗಿ ಟೀಕಿಸಿದ ಟ್ರಂಪ್, “ಅಂದು ಒಬಾಮಾ ಇರಾನ್‌ಗೆ ೧.೭ ಬಿಲಿಯನ್ ಡಾಲರ್ ನಗದು ಸೇರಿದಂತೆ ನೂರಾರು ಬಿಲಿಯನ್ ಡಾಲರ್ ಹಣವನ್ನು ನೀಡಿದ್ದರು. ಆದರೆ ನಮ್ಮ ಒಪ್ಪಂದದಲ್ಲಿ ಯಾವುದೇ ಹಣದ ಕೈಬದಲಾವಣೆ ಆಗುತ್ತಿಲ್ಲ” ಎಂದು ಪ್ರತಿಪಾದಿಸಿದ್ದಾರೆ.


ಆದರೆ ಮಾಧ್ಯಮಗಳ ಪ್ರಕಾರ, ಒಬಾಮಾ ಕಾಲದ ಹಣ ವರ್ಗಾವಣೆಯು ೧೯೭೯ರ ಮುಂಚಿನ ಮಿಲಿಟರಿ ಒಪ್ಪಂದದ ಇತ್ಯರ್ಥವಾಗಿತ್ತೇ ಹೊರತು ನೇರ ಪಾವತಿಯಾಗಿರಲಿಲ್ಲ.ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನದ ತರಾತುರಿಈ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತೀವ್ರ ಉತ್ಸಾಹ ತೋರಿದ್ದಾರೆ. “ಮಹತ್ವದ ಶಾಂತಿ ಒಪ್ಪಂದಕ್ಕೆ ನಾವು ಅತ್ಯಂತ ಹತ್ತಿರವಾಗಿದ್ದೇವೆ. ಮುಂದಿನ ೨೪ ಗಂಟೆಗಳಲ್ಲಿ ಒಪ್ಪಂದ ಅಂತಿಮಗೊಳ್ಳಲಿದ್ದು, ಪಾಕಿಸ್ತಾನವು ಇಂಟರ್ನೆಟ್ ಮೂಲಕ ಎಲೆಕ್ಟ್ರಾನಿಕ್ ಸಹಿ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದೆ. ಮುಂದಿನ ವಾರ ತಾಂತ್ರಿಕ ಮಟ್ಟದ ಮಾತುಕತೆ ನಡೆಯಲಿದೆ” ಎಂದು ಎಕ್ಸ್ (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.

ಇರಾನ್‌ನ ಜಾಗರೂಕತೆ ಮತ್ತು ಆಂತರಿಕ ವಿರೋಧ ಟ್ರಂಪ್ ನೀಡಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೇಯ್ ತಳ್ಳಿಹಾಕಿದ್ದಾರೆ. “ನಾವು ಅಂತಿಮ ಹಂತದಲ್ಲಿದ್ದೇವೆ ಮತ್ತು ಎಂದಿಗೂ ಇಷ್ಟು ಹತ್ತಿರ ಬಂದಿರಲಿಲ್ಲ ನಿಜ. ಆದರೆ ಇಂದೆ ಸಹಿ ಪ್ರಕ್ರಿಯೆ ನಡೆಯುವುದಿಲ್ಲ, ಮುಂದಿನ ದಿನಗಳಲ್ಲಿ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದಿದ್ದಾರೆ.

ಮತ್ತೊಂದೆಡೆ, ಇರಾನ್‌ನ ಮಶ್ಹಾದ್ ನಗರದಲ್ಲಿ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿವೆ. ಕಠಿಣ ನಿಲುವಿನ ಇರಾನಿ ನಾಯಕರು, ಈ ಒಪ್ಪಂದದಿಂದ ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತದೆ ಮತ್ತು ಅಮೆರಿಕಕ್ಕೆ ಶರಣಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯುಎಸ್-ಇರಾನ್ ಒಪ್ಪಂದದ ಪ್ರಮುಖ ಷರತ್ತುಗಳು ಅಮೆರಿಕ ನೀಡಲಿರುವ ವಿನಾಯಿತಿಗಳುಇರಾನ್ ಪಾಲಿಸಬೇಕಾದ ನಿಯಮಗಳುಆರ್ಥಿಕ ನಿರ್ಬಂಧಗಳ ಸಡಿಲಿಕೆ ಇರಾನ್ ಮೇಲಿನ ಕಠಿಣ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಭಾಗಶಃ ಹಿಂಪಡೆಯಲಿದೆ. ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಲಿಖಿತವಾಗಿ ಒಪ್ಪಿಕೊಳ್ಳಬೇಕು. ನಿರ್ದಿಷ್ಟ ಮಿತಿಯಲ್ಲಿ ಇರಾನ್ ತನ್ನ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಬಹುದು.

ಇರಾನ್ ತನ್ನಲ್ಲಿರುವ ಸಮೃದ್ಧ ಯುರೇನಿಯಂ ದಾಸ್ತಾನು ಮತ್ತು ಸಂಸ್ಕರಣೆಯನ್ನು ಸಂಪೂರ್ಣವಾಗಿ ಮಿತಿಗೊಳಿಸಬೇಕು.ಮುಟ್ಟುಗೋಲು ಹಾಕಿಕೊಂಡ ಹಣದ ಬಿಡುಗಡೆ: ಜಾಗತಿಕ ಬ್ಯಾಂಕುಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ೨೪ ಬಿಲಿಯನ್ ಡಾಲರ್ ಆಸ್ತಿಯನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು.

ಹೊರ್ಮುಜ್ ಜಲಸಂಧಿ ಮುಕ್ತ:
ಅಂತಾರಾಷ್ಟ್ರೀಯ ಹಡಗುಗಳಿಗೆ ಜಲಸಂಧಿಯಲ್ಲಿ ಉಚಿತ ಹಾಗೂ ಸುರಕ್ಷಿತ ಸಂಚಾರವನ್ನು ಇರಾನ್ ಖಾತರಿಪಡಿಸಬೇಕು.ನೌಕಾ ತೆರವು: ಇರಾನ್ ಬಂದರುಗಳ ಮೇಲಿರುವ ಅಮೆರಿಕ ನೌಕಾಸೇನೆಯ ದಿಗ್ಬಂಧನವನ್ನು ಹಿಂಪಡೆಯಲಾಗುವುದು. ಮುಂದಿನ ಪೂರ್ಣ ಪ್ರಮಾಣದ ಮಾತುಕತೆಗೆ ಪೂರಕವಾಗಿ ೬೦ ದಿನಗಳ ಕದನ ವಿರಾಮ ಪಾಲಿಸಬೇಕು.

ಯುದ್ಧದ ಕಹಿ ಹಿನ್ನೆಲೆ ಏನಾಗಿತ್ತುಪ್ರಸಕ್ತ ವರ್ಷದ ಫೆಬ್ರವರಿ ೨೮, ೨೦೨೬ ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ನಾಯಕತ್ವ ಹಾಗೂ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿ ಭೀಕರ ವೈಮಾನಿಕ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ಧಾರ್ಮಿಕ ಮುಖಂಡ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು.

ಇದರಿಂದ ಕ್ರುದ್ಧಗೊಂಡ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ನೌಕೆಗಳ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಇದು ಇಡೀ ವಿಶ್ವದಲ್ಲಿ ಇಂಧನ ದರ ಏರಿಕೆಗೆ ಕಾರಣವಾಗಿತ್ತು. ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಹ ಮೃತಪಟ್ಟಿದ್ದರು. ಇದೀಗ ೫ ವಾರಗಳ ನಿರಂತರ ಕದನ ವಿರಾಮ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಮಧ್ಯಸ್ಥಿಕೆಯ ನಂತರ ಉಭಯ ದೇಶಗಳು ಈ ಒಪ್ಪಂದದ ತೀರ್ಮಾನಕ್ಕೆ ಬಂದಿವೆ.

ಟ್ರಂಪ್ ಅವರು ಬಿ-೨ ಬಾಂಬರ್ ವಿಮಾನಗಳ ಮೂಲಕ ಇರಾನ್‌ನ ಪರ್ವತಗಳ ಆಳದಲ್ಲಿ ಅಡಗಿಸಿಡಲಾಗಿರುವ “ಅಣ್ವಸ್ತ್ರ ಧೂಳನ್ನು” ಹೊರತೆಗೆದು ನಾಶಪಡಿಸುವುದಾಗಿ ಹೇಳಿರುವುದು ಜಾಗತಿಕ ರಕ್ಷಣಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇರಾನ್ ವಿದೇಶಾಂಗ ಸಚಿವನ ವಿರುದ್ಧ ಭುಗಿಲೆದ್ದ ಜನಾಕ್ರೋಶ
ಅಮೆರಿಕದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ವಿರುದ್ಧ ಸ್ವದೇಶದಲ್ಲೇ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಇರಾನ್‌ನ ಪ್ರಮುಖ ನಗರವಾದ ಮಶಾದ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಕಚೇರಿ ಎದುರು ನೂರಾರು ಜನರು ಬೃಹತ್ ಪ್ರತಿಭಟನೆ ನಡೆಸಿದ್ದು, ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.


ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರು ಹಾಗೂ ನಾಗರಿಕರು, “ದೇಶದ್ರೋಹಿ ಅರಾಗ್ಚಿಗೆ ಸಾವು ಬರಲಿ”, “ಅರಾಗ್ಚಿ ಒಬ್ಬ ರಾಜಿಪ್ರಿಯ ಹಾಗೂ ನುಸುಳುಕೋರ” ಎಂದು ಆಕ್ರೋಶ ಹೊರಹಾಕಿದ್ದಾರೆ. ಸಚಿವರು ಅಮೆರಿಕ ಎದುರು ಇರಾನ್ ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ.


ಕಳೆದ ಮೂರು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನತೆಯನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕ ನಡುವೆ ದೀರ್ಘಕಾಲದ ಶಾಂತಿ ಒಪ್ಪಂದದ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿವೆ. ಈ ಒಪ್ಪಂದದ ಭಾಗವಾಗಿ, ಇರಾನ್ ಬಂದರುಗಳ ಮೇಲಿನ ಯುಎಸ್ ನೌಕಾಪಡೆಯ ದಿಗ್ಬಂಧನವನ್ನು ತೆರವುಗೊಳಿಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಸಚಿವ ಅರಾಗ್ಚಿ ಇರಾನ್ ಸರ್ಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.


ಆದರೆ, ಈ ಒಪ್ಪಂದದಿಂದಾಗಿ ಇರಾನ್‌ನ ಅತ್ಯಂತ ಕಾರ್ಯತಂತ್ರದ ಜಲಮಾರ್ಗವಾದ ’ಹೊರ್ಮುಜ್ ಜಲಸಂಧಿ’ಯ ಮೇಲಿನ ಇರಾನ್ ನಿಯಂತ್ರಣ ಸಡಿಲಗೊಳ್ಳಲಿದೆ ಎಂದು ಅಲ್ಲಿನ ಕಠಿಣಪಂಥೀಯರು ವಾದಿಸುತ್ತಿದ್ದಾರೆ. ಮಾತುಕತೆಯ ನೆಪದಲ್ಲಿ ಅರಾಗ್ಚಿ ಮತ್ತು ಇರಾನ್ ನಿಯೋಗವು ವಾಷಿಂಗ್ಟನ್‌ಗೆ ಅತಿಯಾದ ಸವಲತ್ತುಗಳನ್ನು ನೀಡಿದೆ ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.


ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೇಯ್ ಪ್ರತಿಕ್ರಿಯಿಸಿ, “ಒಪ್ಪಂದದ ದಿನಾಂಕ ಇನ್ನೂ ನಿಶ್ಚಿತವಾಗಿಲ್ಲ. ಆದರೆ ಭಾನುವಾರ ಸಹಿ ಹಾಕುತ್ತಿಲ್ಲ. ಮುಂಬರುವ ದಿನಗಳಲ್ಲಿ ಇದು ಸಾಧ್ಯವಾಗಬಹುದು,” ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲೂ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ರಾಜತಾಂತ್ರಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.