
ಮೈಸೂರು, ಮೇ 26 : ಬಾಲಿವುಡ್ ನಟ ರಣವೀರ್ ಸಿಂಗ್ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ದಿಢೀರ್ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಘಟನೆಯ ಹಿನ್ನೆಲೆ: ಈ ಹಿಂದೆ ದೈವದ ಬಗ್ಗೆ ಹಗುರವಾಗಿ ಮಾತನಾಡಿ ಅವಹೇಳನಕಾರಿ ವರ್ತನೆ ತೋರಿದ್ದರು ಎಂಬ ಆರೋಪ ರಣವೀರ್ ಸಿಂಗ್ ಮೇಲಿತ್ತು. ಇದಕ್ಕೆ ಪ್ರಾಯಶ್ಚಿತ್ತವಾಗಿ ಇಂದು ಚಾಮುಂಡೇಶ್ವರಿ ದೇವಿಗೆ ತಪ್ಪುಕಾಣಿಕೆ ಒಪ್ಪಿಸಿ ಕ್ಷಮೆಯಾಚಿಸಿದರು.
ದೇವಾಲಯದಲ್ಲಿ ಪೂಜೆ: ರಣವೀರ್ ಸಿಂಗ್ ಗರ್ಭಗುಡಿಯ ಆವರಣದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಮೂಲ ವಿಗ್ರಹ ಹಾಗೂ ಉತ್ಸವಮೂರ್ತಿ ಬಳಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಯಾವುದೇ ವಿಶೇಷ ಭದ್ರತೆ ಅಥವಾ ವಿಐಪಿ ಸೌಲಭ್ಯ ಪಡೆಯದೆ, ಯಾರಿಗೂ ಮಾಹಿತಿ ನೀಡದೆ ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

























