
ಸಂಜೆವಾಣಿ ನ್ಯೂಸ್
ಮೈಸೂರು.ಜೂ.14:- ದೇಸಿ ಬೀಜಗಳು ಕೇವಲ ಕೃಷಿಯ ಒಂದು ಭಾಗವಲ್ಲ, ಅವು ನಮ್ಮ ಆಹಾರ ಸಂಸ್ಕೃತಿ, ಜೈವಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ. ಅವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ'' ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್ ಕರೆ ನೀಡಿದರು. ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭವಾದ ಎರಡು ದಿನಗಳದೇಸಿ ಬೀಜೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಜ ಸಮೃದ್ಧ ಸಂಸ್ಥೆಯು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮತ್ತು ಸಹಜ ಸೀಡ್ಸನ ಆಶ್ರಯದಲ್ಲಿ ಉತ್ಸವ ಆಯೋಜಿಸಿದೆ.
ಗ್ರಾಮ ಪಂಚಾಯಿತಿಯಲ್ಲಿ ಜೀವವೈವಿಧ್ಯ ಸಮಿತಿ:
ಜೀವವೈವಿಧ್ಯ ಸಂರಕ್ಷಣೆಗಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿ ಜನತಾ ಜೀವವೈವಿಧ್ಯ ದಾಖಲಾತಿಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಮಂಡಳಿ ಮಾಡುತ್ತಿದೆ. ಆಸಕ್ತರು ಇದರ ಭಾಗವಾಗಿ ಸ್ಥಳೀಯ ಜ್ಞಾನ ಮತ್ತು ಜೈವಿಕ ಸಂಪತ್ತಿನ ಸಂರಕ್ಷಣೆಗೆ ಮುಂದಾಗಬೇಕು” ಎಂದು ಜಗದೀಶ್ ಹೇಳಿದರು.
ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಹಿಂದಿನ ಕಾಲದಲ್ಲಿ ದೇಸಿ ಬೀಜಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿತ್ತು. ರೈತರು ಬೀಜ ಹಂಚಿಕೊಂಡು ಕೃಷಿ ವೈವಿಧ್ಯ ಉಳಿಸಿದ್ದರು. ಇಂತಹ ಬೀಜೋತ್ಸವಗಳು ಜಾಗೃತಿ ಮೂಡಿಸುತ್ತವೆ'' ಎಂದರು. ಬೀಜ ಸಂರಕ್ಷಕರ ಅನುಭವ: 150ಕ್ಕೂ ಹೆಚ್ಚು ದೇಸಿ ಬೀಜಗಳನ್ನು ಸಂರಕ್ಷಿಸಿರುವ ಕಣಗಾಲು ಪದ್ಮಮ್ಮ,ನಮ್ಮ ಭೂಮಿಗೆ ನಾವು ಜೀತದಾಳುಗಳಾದರೆ ಭೂಮಾತೆ ನಮ್ಮನ್ನು ಕೈಬಿಡುವುದಿಲ್ಲ. ಆರೋಗ್ಯ, ಕೃಷಿ, ಭವಿಷ್ಯಕ್ಕಾಗಿ ದೇಸಿ ಬೀಜ ಬೆಳೆಸಬೇಕು” ಎಂದರು.
ಬೀಜ ಸಂರಕ್ಷಕ ಶ್ರೀನಿವಾಸಮೂರ್ತಿ ಎಸ್.ಆರ್. ಮಾತನಾಡಿ, ದೇಸಿ ಭತ್ತ, ಸ್ಥಳೀಯ ತಳಿಗಳ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಇವು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ತಮ ಆಹಾರ ನೀಡುತ್ತವೆ'' ಎಂದು ವಿವರಿಸಿದರು. 6 ಸಾಧಕ ರೈತರಿಗೆ ಸನ್ಮಾನ: ಕಾರ್ಯಕ್ರಮದಲ್ಲಿಪಾರಂಪರಿಕ ಬೀಜ ಸಂರಕ್ಷಕ ಪ್ರಶಸ್ತಿ?2026” ಪ್ರದಾನ ಮಾಡಲಾಯಿತು. ದಶಕಗಳಿಂದ ದೇಸಿ ಬೀಜ ಸಂರಕ್ಷಣೆ, ಸಮುದಾಯ ಬೀಜ ಬ್ಯಾಂಕ್ ನಿರ್ವಹಣೆಯಲ್ಲಿ ತೊಡಗಿರುವ ಕುಂದಗೋಳದ ಕಮಲಮ್ಮ ಇ. ಖಾನನ್ನವರ, ಮಚ್ಚೂರು ಹಾಡಿಯ ಪಾರ್ವತಿ, ಪಿರಿಯಾಪಟ್ಟಣದ ಮಂಜುಳಾ ಕಾಳಪ್ಪ, ಹಾವೇರಿಯ ಮಹದೇವಪ್ಪ ಉಪ್ಪಾರ, ಮುಳಬಾಗಿಲಿನ ಪ್ರಭಾಕರ ಬಿ. ಹಾಗೂ ಕೊಡಗಿನ ಬಿ.ಪಿ. ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.
ಉತ್ಸವದಲ್ಲಿ ಏನೇನಿದೆ?
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ 50ಕ್ಕೂ ಹೆಚ್ಚು ಬೀಜ ಸಂರಕ್ಷಕರು 500 ಕ್ಕೂ ಹೆಚ್ಚು ದೇಸಿ ಬೀಜ, ಅಪರೂಪದ ಭತ್ತ, ಸಿರಿಧಾನ್ಯ, ತರಕಾರಿ, ಗೆಡ್ಡೆ-ಗೆಣಸು ಹಾಗೂ ಸ್ಥಳೀಯ ಹಣ್ಣಿನ ತಳಿಗಳನ್ನು ಪ್ರದರ್ಶಿಸಿದ್ದಾರೆ.
ಕುಂದಗೋಳದ ರೈತರು ಸಿಂಧೂ ನಾಗರಿಕತೆಯ ಕಾಲದ ತಳಿ ಎಂದು ನಂಬಲಾಗುವ ಪಿಗಂಬೇರಿ ಸೇರಿ 25 ಬಗೆಯ ಗೋಧಿ ತಳಿಗಳನ್ನು ಪ್ರದರ್ಶಿಸಿದ್ದಾರೆ.
ಜ್ಯೂಸ್ ಬಿಲ್ವ, ಶಂಕರ ರೆಡ್ ಜಾಕ್, ಪೀನಟ್ ಬಟರ್ ಫ್ರೂಟ್, ಮಲ್ಬೆರಿ ಹಣ್ಣಿನ ಸಸಿಗಳು ಮಾರಾಟಕ್ಕಿವೆ.
ದೇವಧಾನ್ಯ ರೈತ ಉತ್ಪಾದಕರ ಸಂಸ್ಥೆಯಿಂದ ಕಪ್ಪು ಗೋಧಿ, ಕಪ್ಪು ಕಡಲೆ, ಜೋಳದಿಂದ ತಯಾರಿಸಿದ ಹಿಟ್ಟು ಮಾರಾಟ.
ಸಸ್ಯಧಾಮ ನರ್ಸರಿ, ಬೆಳುವಾಳ ತೋಟದಿಂದ ಸ್ಥಳೀಯ ಹಣ್ಣಿನ ಸಸಿಗಳು ಲಭ್ಯ.
ದೇಸಿ ಸೀಡ್ ಪೆÇ್ರಡ್ಯೂಸರ್ ಕಂಪನಿಯಿಂದ ರಾಗಿ, ಭತ್ತ, ಸಿರಿಧಾನ್ಯ, ತರಕಾರಿ ಬೀಜ ಮಾರಾಟ.
ವಿವಿಧ ಬಗೆಯ ಮಾವು, ನೇರಳೆ, ಹಲಸು ಹಣ್ಣುಗಳ ರುಚಿ ನೋಡಲು ಗ್ರಾಹಕರ ದಂಡು.
ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಪಲ್ಲೆ ಸೇರಿ ಸಾಂಪ್ರದಾಯಿಕ ಆಹಾರ ಮಳಿಗೆ.
ಬೆಂಗಳೂರಿನ ಸಾಯಿಲ್ ಸಂಸ್ಥೆಯಿಂದ ಬೀಜೋಪಚಾರ, ಸಾವಯವ ಗೊಬ್ಬರ ತಯಾರಿಕೆಯ ಪ್ರಾಯೋಗಿಕ ಪ್ರದರ್ಶನ.
ತರಬೇತಿ, ಸ್ಪರ್ಧೆ:
ಉತ್ಸವದ ಅಂಗವಾಗಿ ಬಿದಿರು ಕೃಷಿ: ಅವಕಾಶಗಳು ಮತ್ತು ಮಾರುಕಟ್ಟೆ'' ಕುರಿತು ರೈತರಿಗೆ ತರಬೇತಿ ನಡೆಯಿತು. ದಾವಣಗೆರೆಯ ಬಿದಿರು ತಜ್ಞ ಜಬೀವುಲ್ಲಾ ಮಾಹಿತಿ ನೀಡಿದರು. ಭಾನುವಾರಬೀಜ ಸಂರಕ್ಷಣೆ ಮತ್ತು ಸಾವಯವ ಬೀಜೋತ್ಪಾದನೆ” ಕುರಿತು ತರಬೇತಿ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಬೀಜ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಹಜ ಸಮೃದ್ಧದ ಮುಖ್ಯಸ್ಥ ಜಿ. ಕೃಷ್ಣಪ್ರಸಾದ್ ಮಾತನಾಡಿ, “ರಾಜ್ಯದ ಬೀಜ ಸಂರಕ್ಷಕರು, ಸಾವಯವ ಕೃಷಿಕರು ಒಂದೇ ವೇದಿಕೆಯಲ್ಲಿ ಸೇರಲು ಬೀಜೋತ್ಸವ ಅವಕಾಶ ಕಲ್ಪಿಸಿದೆ. ಗ್ರಾಹಕರಿಗೆ ದೇಸಿ ತಳಿಗಳ ಮಹತ್ವ ತಿಳಿಸಲು ಸಹಕಾರಿಯಾಗಿದೆ” ಎಂದರು.





























