
ತಿರುವನಂತಪುರ, ಅ.9- ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ ಹಾಗೂ ಅಳಿಯ, ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್ ಇಂದು ಆದೇಶಿಸಿದೆ.
ಕೊಚ್ಚಿನ್ ಮಿನರಲ್ಸ್ ಆ?ಯಂಡ್ ರುಟೈಲ್ ಲಿಮಿಟೆಡ್ (ಸಿಎಂಆರ್ಎಲ್) ಕಂಪನಿಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿರುವ ವರದಿಯ ಆಧಾರದ ಮೇಲೆ ಈ ಆದೇಶ ನೀಡಲಾಗಿದೆ.
ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ
ಪೀಠವು ವಕೀಲ ಕೆ.ಎಂ. ಶಾಜಹಾನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ. ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವ ಬದಲು ಪ್ರಾಥಮಿಕ ತನಿಖೆ ನಡೆಸುತ್ತಿರುವ ಪೆÇಲೀಸರ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಕೇರಳ ಮೂಲದ ಸಿಎಂಆರ್ಎಲ್ ಗಣಿಗಾರಿಕೆ ಕಂಪನಿಯು ವೀಣಾ ಟಿ ಅವರಿಗೆ ಸೇರಿದ, ಈಗ ಕಾರ್ಯನಿರ್ವಹಿಸದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಸಂಸ್ಥೆಗೆ ಒಟ್ಟು 2.78 ಕೋಟಿ ರೂ. ಪಾವತಿಸಿದೆ.
ಐಟಿ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುವ ನೆಪದಲ್ಲಿ ಈ ಹಣ ಪಾವತಿಸಲಾಗಿದೆ ಎಂಬುದು ತನಿಖಾ ಸಂಸ್ಥೆಯ ಆರೋಪವಾಗಿದೆ. ಈ ಪಾವತಿಗಳ ಸ್ವರೂಪ ಹಾಗೂ ಅವುಗಳ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಸಬೇಕೆಂದು ಇ.ಡಿ. ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ವೀಣಾ ನಿವಾಸದ ಮೇಲೆ ಇ.ಡಿ. ದಾಳಿ
ಜೂನ್ನಲ್ಲಿ ತಿರುವನಂತಪುರಂನಲ್ಲಿ ವೀಣಾ ವಾಸಿಸುತ್ತಿದ್ದ ಬಾಡಿಗೆ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ಅವರೂ ಅಲ್ಲಿದ್ದರು ಎಂದು ವರದಿಯಾಗಿದೆ. ಬಳಿಕ ವೀಣಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಆಗಸ್ಟ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ವೀಣಾಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ ದುಬೈಗೆ ಹಣ ವರ್ಗಾವಣೆಯ ವಿವರಗಳಿವೆ ಎನ್ನಲಾದ ಕೆಲವು ಕೈಬರಹದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿತ್ತು.
ಆರೋಪ ನಿರಾಕರಿಸಿದ ಮೊಹಮ್ಮದ್ ರಿಯಾಸ್
ಇ.ಡಿ. ತನಿಖೆ ಹಾಗೂ ಶೋಧ ಕಾರ್ಯಾಚರಣೆಗಳ ವಿರುದ್ಧ ಪ್ರತಿಕ್ರಿಯಿಸಿರುವ ಮಾಜಿ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್, ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಕಟ್ಟುಕಥೆಯಾಗಿದ್ದು, ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಮಾನಹಾನಿ ಮಾಡುವ ಉದ್ದೇಶ ಹೊಂದಿವೆ ಎಂದು ಅವರು ಈ ಹಿಂದೆ ಹೇಳಿದ್ದರು.
ಇ.ಡಿ. ತನಿಖೆಗೆ ಸಂಬಂಧಿಸಿದಂತೆ ವೀಣಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂಬ ವರದಿಗಳನ್ನೂ ರಿಯಾಸ್ ತಳ್ಳಿಹಾಕಿದ್ದರು. ಅವು ಸಂಪೂರ್ಣ ಸುಳ್ಳು ಎಂದು ಹೇಳಿದ್ದ ಅವರು, ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ಸ್ಪಷ್ಟಪಡಿಸಿದ್ದರು.





















