
ಪುತ್ತೂರು; ಸಣ್ಣ ವಿಚಾರವೊಂದನ್ನು ಮುಂದಿಟ್ಟುಕೊಂಡು ಪುತ್ತೂರಿನ ದರ್ಬೆಯಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಖಂಡನೀಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಬಳಿಕ ಈ ರೀತಿಯ ಘಟನೆಗಳು ನಡೆಯುತ್ತಿವೆ. ಗೃಹಸಚಿವ ಪ್ರಿಯಾಂಕ ಖರ್ಗೆ ಇಂತಹ ಘಟನೆಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ. ಪುತ್ತೂರಿನಲ್ಲಿ ಕೆಲ ತಿಂಗಳಿನಿಂದ ತಾಲಿಬಾನ್ ಸಂಸ್ಕೃತಿ ಜಾರಿಯಲ್ಲಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಭಾನುವಾರ ದರ್ಭೆ ಘಟನೆಯಲ್ಲಿ ಗಾಯಾಳು ಆಗಿ ಆಸ್ಪತ್ರೆಯಲ್ಲಿರುವ ಅಂಜನಾ ಪೈ ಅವರ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು.
ಅಂಗಡಿಯಲ್ಲಿ ನಡೆದ ಘಟನೆ ಬಗ್ಗೆ ಕಾನೂನು ಅಥವಾ ಪೊಲೀಸ್ ಇಲಾಖೆ ಮೂಲಕ ಬಗೆ ಹರಿಸಬಹುದಿತ್ತು. ಅದು ಬಿಟ್ಟು ಏಕಾಏಕಿ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಘಟನೆ ಬಗ್ಗೆ ಪುತ್ತೂರಿನ ಶಾಸಕರು ಮತ್ತು ಗೃಹಸಚಿವರು ಮೌನವಾಗಿದ್ದಾರೆ. ಈ ಘಟನೆಯ ಹಿಂದೆ ಕಾಣದ ಶಕ್ತಿಗಳ ಕೈವಾಡ ಇದೆ ಎಂಬ ಸಂಶಯ ಇದೆ. ತಾಲೂಕಿನ ಹೊರಭಾಗದಿಂದ ಬಂದು ಗಲಾಟೆ ಮಾಡಿದ್ದಾರೆ. ಹಲ್ಲೆಗೊಳಗಾದವರ ಮೇಲೆ ೩೦೭ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಗೆ ಒತ್ತಡ ಇತ್ತಾ ಎಂದು ಪ್ರಶ್ನಿಸಿದ ಅವರು ಒಂದು ಮತ ಒಂದು ಧರ್ಮದ ಮೇಲೆ ಕೇಸು ಮಾಡುವಂತಹ ಪ್ರಕ್ರಿಯೆ ಇಲ್ಲಿ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿಯಿಂದ ಹೋರಾಟದ ಎಚ್ಚರಿಕೆ
ಗೃಹಸಚಿವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ದಮ್ಮು ಇದೆ. ಆದರೆ ಮತೀಯವಾದ, ತಾಲಿಬಾನ್ ಸಂಸ್ಕೃತಿ ವಿರುದ್ಧ ಯಾಕೆ ಮಾತನಾಡುವುದಿಲ್ಲ. ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ೩೦೭ ಪ್ರಕರಣ ದಾಖಲಿಸಬೇಕಿತ್ತು. ಆದರೆ ಇಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಕಾನೂನು ತರಲಾಗಿದೆ. ಹಲ್ಲೆ ಮಾಡಿದವರ ವಿರುದ್ದ ಪ್ರಕರಣ ದಾಖಲಿಸದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ. ಮುಂದೆ ಆಗಬಹುದಾದ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಸಿದರು.

































