
ಸಂಜೆವಾಣಿ ನ್ಯೂಸ್
ಮೈಸೂರು, ಜು.29:- ರಾಜ್ಯ ಸರ್ಕಾರ ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ಟ್ರಿಬ್ಯುನಲ್ ಮುಂದೆಯೂ ಸರಿಯಾದ ವಾದ ಮಾಡದೇ ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ ವಿಷ ಹಾಕಿದ್ದು, ಮುಖ್ಯಮಂತ್ರಿ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕಾವೇರಿ ಟ್ರಿಬ್ಯುನಲ್ ಆದೇಶ ವಿಚಾರವಾಗಿ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಅವರು ರೈತರ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದಿದ್ದರು. ಇವರ ನಡೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತಾಗಿದೆ. ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಮುಂದೆ ಸರಿಯಾಗಿ ವಾದ ಮಂಡನೆ ಮಾಡಿಲ್ಲ. ಇದರ ಪರಿಣಾಮ ಈ ರೀತಿಯ ತೀರ್ಪು ಬಂದಿದೆ. ರೈತರ ರಕ್ಷಣೆಗೆ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಬೇಕು. ನಮ್ಮ ರೈತರಿಗೆ ವಿಷ ಉಣಿಸುವ ಕೆಲಸ ಮಾಡ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ, ತಮಿಳುನಾಡಿಗೆ ಯಾಕೆ ಕದ್ದು ಮುಚ್ಚಿ ನೀರು ಬಿಟ್ಟರು. ರಾಜ್ಯ ಸರ್ಕಾರಕ್ಕೆ ರೈತರು ಆದ್ಯತೆಯಾಗಿ ಉಳಿದಿಲ್ಲ. ಯಾರನ್ನೋ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನು ಬಲಿ ಕೊಡುತ್ತಿದೆ. ಬಿಜೆಪಿ ಮಾತ್ರ ಯಾವಗಾಲೂ ರೈತರ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡುವ ಸರ್ಕಸ್ನಲ್ಲೇ ಇದೆ. ಸಚಿವ ಸ್ಥಾನಕ್ಕೆ ರೇಟ್ ಫಿಕ್ಸ್ ಆಗುವವರೆಗೂ ಸಂಪುಟ ವಿಸ್ತರಣೆಯ ಡೇಟ್ ಫಿಕ್ಸ್ ಆಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲೇ ಸಿಎಂ ಡಿಕೆಶಿ ತಲ್ಲಿನರಾಗಿದ್ದಾರೆ. ಇವರ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡದಾಗುತ್ತಿವೆ ಎಂದು ಹೇಳಿದರು.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೈಸೂರಿನ ಶಿಲ್ಪಾ ಸಾಧನೆ ಮಾಡಿರುವ ವಿಚಾರವಾಗಿ ಮಾತನಾಡಿ, ಕೆ.ಆರ್.ನಗರ ತಾಲೂಕಿನ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಬಂದ ಹುಡುಗಿಯ ಸಾಧನೆ ಹೆಮ್ಮೆ ಪಡುವಂತಹದ್ದು ಎಂದು ಶಿಲ್ಪಾರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ಆ.1ರಂದು ವಿವೇಕಾನಂದ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ. ಅಂದು ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿಯವರು ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿಯವರ ಕೈಯಿಂದಲೇ ಸ್ಮಾರಕ ಉದ್ಘಾಟನೆ ಮಾಡಬೇಕೆಂಬುದು ಸ್ವಾಮೀಜಿಗಳ ಆಸೆಯಾಗಿತ್ತು. ಅವರ ಆಸೆಯಂತೆಯೇ ಸ್ಮಾರಕ ಉದ್ಘಾಟನೆ ಆಗುತ್ತಿದೆ ಎಂದರು.


































