
ಸಂಜೆವಾಣಿ ನ್ಯೂಸ್
ಮೈಸೂರು, ಜು.30:- ಆಷಾಢ ಮಾಸದ ಪ್ರಯುಕ್ತ ಶ್ರೀದುರ್ಗಾ ಫೌಂಡೇಶನ್ ಹಾಗೂ ಪಿಆರ್‍ಕೆ ಫೌಂಡೇಶನ್ ವತಿಯಿಂದ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ, ಬಳೆ, ಅರಿಶಿನ-ಕುಂಕುಮ ಬಾಗಿನ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು, ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಶಕ್ತಿ ದೇವತೆಯ ದರ್ಶನ ಪಡೆದರೆ ಒಳಿತಾಗುತ್ತದೆ. ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಇರುವ ಚಾಮುಂಡಿತಾಯಿಗೆ ಆಷಾಢ ಮಾಸದಲ್ಲಿ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪ್ರಾರ್ಥನೆ, ಪೂಜಾ ಕೈಂಕರ್ಯ ಸೇವೆ ಸಲ್ಲಿಸಲು ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತಾ ಮತ್ತು ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸಿ ಬಾಗಿನ ಸಮರ್ಪಣೆ ನೀಡುತ್ತಿರುವುದು ಅರ್ಥಪೂರ್ಣವಾದ ಆಚರಣೆಯಾಗಿದೆ. ಧಾರ್ಮಿಕ ಪರಂಪರೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆಯೂ ಸಹ ಬಹಳ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರಲ್ಲಿ ಧರ್ಮ ಜಾಗೃತಿ ಮತ್ತು ಧಾರ್ಮಿಕ ಸಾಮರಸ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ಸೋಮಣ್ಣ, ಪಿಆರ್‍ಕೆ ಫೌಂಡೇಶನ್ ಅಧ್ಯಕ್ಷ ಅಯ್ಯಪ್ಪ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಯುವ ಮುಖಂಡ ಜಿ.ರಾಘವೇಂದ್ರ, ಮಂಜುಳಾ ಸೋಮಣ್ಣ, ರೂಪ ಗೌಡ, ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಶೋಭಾ ದಿನೇಶ್, ಶೃತಿ ವಿನೋದ್, ಹೇಮಾ, ರಮ್ಯಾ, ವಿಜಯಲಕ್ಷ್ಮಿ ಅಯ್ಯಂಗಾರ್, ಸುವರ್ಣ, ರಾಧಾ ಸೇರಿದಂತೆ ಇತರರು ಉಪಸ್ಥಿತರಿದ್ದರು.


































