
ವಾಷಿಂಗ್ಟನ್,ಜು.೭: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ.
“ನಾವು ಇರಾನ್ ಜೊತೆ ಒಂದೋ ಶಾಂತಿ ಒಪ್ಪಂದಕ್ಕೆ ಬರುತ್ತೇವೆ, ಇಲ್ಲವೇ ಈ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿಬಿಡುತ್ತೇವೆ” ಎಂದು ಟ್ರಂಪ್ ಗುಡುಗಿದ್ದಾರೆ. ಕೇವಲ ಕೆಲವೇ ಗಂಟೆಗಳಲ್ಲಿ ಇರಾನ್‌ನ ಇಡೀ ಮೂಲಸೌಕರ್ಯವನ್ನು ನಾಶಪಡಿಸುವ ಸಾಮರ್ಥ್ಯ ವಾಷಿಂಗ್ಟನ್‌ಗೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಳೆದ ವಾರವಷ್ಟೇ ಉಭಯ ದೇಶಗಳ ನಡುವಿನ ಪರೋಕ್ಷ ಮಾತುಕತೆಗಳು ಯಾವುದೇ ಸಕಾರಾತ್ಮಕ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದ್ದವು. ಫೆಬ್ರವರಿಯಲ್ಲಿ ನಡೆದ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯ ನಂತರ, ರಾಜತಾಂತ್ರಿಕ ಮಾತುಕತೆಗಾಗಿ ೬೦ ದಿನಗಳ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಈ ಕದನ ವಿರಾಮದ ಅವಧಿಯಲ್ಲೂ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಓವಲ್ ಕಚೇರಿಯಲ್ಲಿ ಸುದ್ದಿಗಾ ರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, “ನಾವು ಯಾವುದಾದರೊಂದು ರೀತಿಯಲ್ಲಿ ಗೆದ್ದೇ ಗೆಲ್ಲುತ್ತೇವೆ. ನಾವು ಯುದ್ಧಕ್ಕಿಂತ ಹೆಚ್ಚಾಗಿ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಲು ಬಯಸುತ್ತೇವೆ. ಏಕೆಂದರೆ ಅಲ್ಲಿನ ೯.೧ ಕೋಟಿ ಜನರ ಮೇಲೆ ಪ್ರಭಾವ ಬೀರಲು ನನಗೆ ಇಷ್ಟವಿಲ್ಲ. ಆದರೆ ಇರಾನ್‌ನ ದೊಡ್ಡ ಮತ್ತು ಆಧುನಿಕ ವಿದ್ಯುತ್ ಸ್ಥಾವರಗಳನ್ನು ಕೇವಲ ಒಂದು ಮಧ್ಯಾಹ್ನದ ಅವಧಿಯಲ್ಲಿ ಸಂಪೂರ್ಣವಾಗಿ ಧ್ವಂಸಗೊಳಿಸಿ, ಇಡೀ ದೇಶವನ್ನು ಕತ್ತಲಿಗೆ ತಳ್ಳುವ ಶಕ್ತಿ ನಮಗಿದೆ. ಇರಾನ್‌ನ ಸೇತುವೆಗಳನ್ನು ಕೇವಲ ಒಂದು ಗಂಟೆಯಲ್ಲಿ ಉರುಳಿಸಬಲ್ಲೆವು. ಈ ಕಟು ಸತ್ಯ ಅವರಿಗೂ ತಿಳಿದಿದೆ” ಎಂದು ಎಚ್ಚರಿಸಿದ್ದಾರೆ.
ಕಳೆದ ಫೆಬ್ರವರಿ ೨೮ ರಂದು ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಇತ್ತೀಚೆಗೆ ನಡೆದ ಅವರ ಸಪ್ತಾಹದ ಸರ್ಕಾರಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಇರಾನ್‌ನ ಎಲ್ಲಾ ಪ್ರಮುಖ ಹಿರಿಯ ನಾಯಕರು ಒಂದೆಡೆ ಜಮಾಯಿಸಿದ್ದರು. ಈ ಕುರಿತು ’ಆಕ್ಸಿಯೋಸ್ ಸಂಸ್ಥೆಗೆ ನೀಡಿದ ಸಂದರ್ಶನವನ್ನು ನೆನಪಿಸಿದ ಟ್ರಂಪ್, “ಆಗ ಎಲ್ಲಾ ನಾಯಕರು ಒಂದೇ ಕಡೆ ಇದ್ದರು. ಒಂದೇ ಒಂದು ದಾಳಿಯ ಮೂಲಕ ಎಲ್ಲರನ್ನೂ ಮುಗಿಸುವ ಸಾಮರ್ಥ್ಯ ನಮಗಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ, ಏಕೆಂದರೆ ನಾಯಕರೆಲ್ಲರೂ ಮೃತಪಟ್ಟರೆ ನಮಗೆ ಮಾತುಕತೆ ನಡೆಸಲು ಯಾರೂ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇರಾನ್ ತೀವ್ರ ಆಕ್ರೋಶ
ಟ್ರಂಪ್ ಅವರ ಈ ಹೇಳಿಕೆಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ’ಎಕ್ಸ್’ (ಟ್ವಿಟರ್) ನಲ್ಲಿ ಅಮೆರಿಕ ವಿರುದ್ಧ ವಾಗ್ದಾಳಿ ನಡೆಸಿದ್ದು, “ಅಮೆರಿಕಕ್ಕೆ ಯಾವುದೇ ನಾಗರಿಕತೆ, ಇತಿಹಾಸ ಅಥವಾ ಗೌರವ ಇಲ್ಲ. ಹೀಗಾಗಿ ಖಮೇನಿ ಅವರ ನಿಧನದ ದುಃಖ ಅದಕ್ಕೆ ಅರ್ಥವಾಗುವುದಿಲ್ಲ. ನೀವು ಆಯತೊಲ್ಲಾ ಖಮೇನಿ ಅವರನ್ನು ಕೊಂದಿರಬಹುದು, ಆದರೆ ನೆನಪಿಡಿ, ನೀವು ಸುಗಂಧ ದ್ರವ್ಯದ ಸೀಸೆಯನ್ನು ಒಡೆದಿದ್ದೀರಿ. ಈಗ ಅದರ ಸುಗಂಧ ಎಲ್ಲೆಡೆ ಹರಡುತ್ತಿದೆ” ಎಂದು ತಿರುಗೇಟು ನೀಡಿದೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷರ ನಿರಂತರ ಬೆದರಿಕೆಗಳ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಟ್ರಂಪ್ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಖಮೇನಿ ಅಂತ್ಯಕ್ರಿಯೆಯ ವೇಳೆಯೂ ‘ಟ್ರಂಪ್‌ನನ್ನು ಕೊಲ್ಲಿ ಎಂಬ ಘೋಷಣೆಗಳು ಮೊಳಗಿವೆ ಎಂದು ವರದಿಯಾಗಿದೆ.





























