
ಕಲಬುರಗಿ,ಅ.11: ಕೇಂದ್ರ ಶಿಕ್ಷಣ ಸಚಿವಾಲಯದ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಆಯೋಜಿಸಿರುವ ಯುವ ಸಂಗಮ 7ನೇ ಹಂತದ ಭಾಗವಾಗಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ರಾಜ್ಯದ ವಿವಿಧ ಜಿಲ್ಲೆಗಳ 40 ವಿದ್ಯಾರ್ಥಿಗಳು ಹಾಗೂ ಮೂವರು ಬೋಧಕ ಸಿಬ್ಬಂದಿ ಸೇರಿದಂತೆ ಒಟ್ಟು 43 ಸದಸ್ಯರ ನಿಯೋಗದ ಮಧ್ಯಪ್ರದೇಶ ಭೇಟಿಯನ್ನು ಸಂಯೋಜಿಸಿದೆ. ಭೋಪಾಲ್ನ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್ಪಿಎ) ಈ ಕಾರ್ಯಕ್ರಮದ ಆತಿಥೇಯ ಸಂಸ್ಥೆಯಾಗಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಅಕ್ಟೋಬರ್ 10ರಂದು ನಿಯೋಗಕ್ಕೆ ಚಾಲನೆ ನೀಡಿದರು. ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವಿನ ಸಾಂಸ್ಕøತಿಕ ವಿನಿಮಯವನ್ನು ಉತ್ತೇಜಿಸುವುದು, ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಹಾಗೂ ಎರಡೂ ರಾಜ್ಯಗಳ ಯುವಜನರಲ್ಲಿ ಪರಸ್ಪರ ತಿಳುವಳಿಕೆಯನ್ನು ವೃದ್ಧಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಪ್ರವಾಸದ ಅಂಗವಾಗಿ ಇಂದು (ಅಕ್ಟೋಬರ್ 11) ನಿಯೋಗವು ಭೋಪಾಲ್ನ ಅಪ್ಪರ್ ಲೇಕ್, ಮಧ್ಯಪ್ರದೇಶ ವಿಧಾನಸಭೆ ಮತ್ತು ಭಾರತ್ ಭವನಕ್ಕೆ ಭೇಟಿ ನೀಡಲಿದೆ. ಅಕ್ಟೋಬರ್ 12ರಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಸಾಂಚಿ ಸ್ತೂಪ ಹಾಗೂ ರಾಜಭವನಕ್ಕೆ ಭೇಟಿ ನೀಡಲಿದೆ. ಅಕ್ಟೋಬರ್ 13ರಂದು ಭೋಪಾಲ್ನ ಹಳೆಯ ನಗರ, ಬುಡಕಟ್ಟು ವಸ್ತುಸಂಗ್ರಹಾಲಯ, ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಸಂಸ್ಥೆಗೆ ಭೇಟಿ ನೀಡಲಿದೆ.
ಅಕ್ಟೋಬರ್ 14ರಂದು ನಿಯೋಗವು ಭೋಜೇಶ್ವರ ದೇವಾಲಯ ಮತ್ತು ಭೀಮ್ಬೆಟ್ಕಾ ಶಿಲಾ ಆಶ್ರಯ ತಾಣಗಳಿಗೆ ಭೇಟಿ ನೀಡಲಿದೆ. ಅಕ್ಟೋಬರ್ 15ರಂದು ಇಂದೋರ್ನ ರಾಜವಾಡ ಅರಮನೆ ಹಾಗೂ ಇತರ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲಿದೆ. ಪದ್ಮ ಪ್ರಶಸ್ತಿ ಪುರಸ್ಕೃತೆ ದುರ್ಗಾ ಬಾಯಿ ವ್ಯಾಮ್ ಅವರ ನೇತೃತ್ವದಲ್ಲಿ ನಡೆಯಲಿರುವ ಗೊಂಡ್ ಕಲಾ ಕಾರ್ಯಾಗಾರವು ಪ್ರವಾಸದ ವಿಶೇಷ ಆಕರ್ಷಣೆಯಾಗಿರಲಿದೆ. ಅಕ್ಟೋಬರ್ 16ರಂದು ಭೋಪಾಲ್ನ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ನಲ್ಲಿ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 17ರಂದು ನಿಯೋಗವು ಕರ್ನಾಟಕಕ್ಕೆ ಮರಳಲಿದೆ.
ಈ ರಾಜ್ಯದ ನಿಯೋಗದೊಂದಿಗೆ ಸಿ.ಯು.ಕೆ.ಯ ಯುವ ಸಂಗಮ 7ನೇ ಹಂತದ ನೋಡಲ್ ಅಧಿಕಾರಿ ಡಾ. ಎಂ. ಶಿವ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಕೃಷ್ಣ ಶೇಖರ್ ಶರ್ಮಾ ಮತ್ತು ಡಾ. ಸಂಜನಾ ಕೌಶಿಕ್ ಅವರು ತೆರಳಿದ್ದಾರೆ.
ಇತ್ತೀಚೆಗೆ, ಯುವ ಸಂಗಮದ ಪರಸ್ಪರ ವಿನಿಮಯ ಕಾರ್ಯಕ್ರಮದಡಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3, 2026ರವರೆಗೆ ಮಧ್ಯಪ್ರದೇಶದ 51 ಸದಸ್ಯರ ನಿಯೋಗಕ್ಕೆ ಸಿಯುಕೆ ಆತಿಥ್ಯ ವಹಿಸಿತ್ತು. ಈ ನಿಯೋಗವು ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಶಿಕ್ಷಣ ಸಂಸ್ಥೆಗಳು, ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಅರಿಯಲು ಬೆಂಗಳೂರು, ಬೀದರ್ ಹಾಗೂ ಕಲಬುರಗಿಗೆ ಭೇಟಿ ನೀಡಿತ್ತು.
ಯುವ ಸಂಗಮವು ವಿವಿಧ ರಾಜ್ಯಗಳ ಯುವಜನರಿಗೆ ಪರಸ್ಪರರ ಸಂಸ್ಕೃತಿ, ಸಂಪ್ರದಾಯಗಳು, ಶಿಕ್ಷಣ ವ್ಯವಸ್ಥೆ ಮತ್ತು ಅಭಿವೃದ್ಧಿ ಸಾಧನೆಗಳನ್ನು ಪರಿಚಯಿಸುವ ಮೂಲಕ ಸಾಂಸ್ಕೃತಿಕ ವಿನಿಮಯ, ಯುವಜನರ ಪಾಲ್ಗೊಳ್ಳುವಿಕೆ ಹಾಗೂ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುತ್ತದೆ.























