
ಜಮಖಂಡಿ :ಜೂ.1:ತಾಲೂಕಿನ ಗೋಠೆ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಲೋಕಾರ್ಪಣೆ ಹಾಗೂ ಬುದ್ಧ ವಿಹಾರ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವು ಭಾನುವಾರ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಬಕಾರಿ ಆಯುಕ್ತ ಫಕೀರಪ್ಪ ಚಲವಾದಿ ಅವರು, ಸ್ವಾತಂತ್ರ್ಯಾನಂತರ ಹಲವು ದಶಕಗಳ ಬಳಿಕ ಗ್ರಾಮದಲ್ಲಿ ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಸ್ಥಾಪನೆಯಾಗಿರುವುದು ಸಂತಸದ ಸಂಗತಿ ಎಂದರು. ಡಾ. ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನ, ಮತದಾನದ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವುಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಂಬೇಡ್ಕರ್ ಚಿಂತಕ ಬಿ. ಗೋಪಾಲ್ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಹೋರಾಟ, ಸಂವಿಧಾನ ರಚನೆಯಲ್ಲಿ ಅವರ ಪಾತ್ರ, ಶಿಕ್ಷಣದ ಮಹತ್ವ ಹಾಗೂ ಸಮಾನತೆಯ ಸಮಾಜ ನಿರ್ಮಾಣದ ಕುರಿತ ಚಿಂತನೆಗಳನ್ನು ವಿವರಿಸಿದರು. ಅಂಬೇಡ್ಕರ್ ಅವರನ್ನು ಕೇವಲ ಜಯಂತಿ ಹಾಗೂ ಪ್ರತಿಮೆಗಳಿಗೆ ಸೀಮಿತಗೊಳಿಸದೆ, ಅವರ ಬರಹಗಳು ಮತ್ತು ವಿಚಾರಧಾರೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಮಾತನಾಡಿ, ತಮ್ಮ ತಂದೆ ದಿವಂಗತ ಸಿದ್ದು ನ್ಯಾಮಗೌಡ ಅವರು ಗ್ರಾಮದಲ್ಲಿ ಅಂಬೇಡ್ಕರ್ ವೃತ್ತ ಹಾಗೂ ಪ್ರತಿಮೆ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದರು. ಇಂದು ಆ ಕನಸು ನನಸಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಅನುಭವಿಸಿದ ಸಂಕಷ್ಟಗಳ ನಡುವೆಯೂ ಶಿಕ್ಷಣದ ಮೂಲಕ ವಿಶ್ವದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಇಂದಿನ ಪೀಳಿಗೆ ಶಿಕ್ಷಣವನ್ನು ಜೀವನದ ಅಸ್ತ್ರವನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಆಶೀರ್ವಚನ ನೀಡಿದ ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ, ಇಡೀ ರಾಷ್ಟ್ರದ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಶಿಲ್ಪಿ ಎಂದು ಬಣ್ಣಿಸಿದರು. ಭಾರತದ ಏಕತೆ, ಸಮಗ್ರತೆ ಹಾಗೂ ಪ್ರಜಾಪ್ರಭುತ್ವದ ಅಡಿಪಾಯ ಸಂವಿಧಾನವಾಗಿದ್ದು, ಅದನ್ನು ದೇಶಕ್ಕೆ ನೀಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಎಂದು ಹೇಳಿದರು.
ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು, ಶಿಕ್ಷಣದ ಅವಕಾಶ ಹಾಗೂ ಸಾಮಾಜಿಕ ನ್ಯಾಯ ದೊರಕುವಂತೆ ಮಾಡಿದ ಮಹಾನ್ ಚಿಂತಕರಾಗಿದ್ದಾರೆ. ಅವರ ಪ್ರತಿಮೆಯನ್ನು ಸ್ಥಾಪಿಸುವುದಕ್ಕಿಂತ ಅವರ ಚಿಂತನೆಗಳು, ಆದರ್ಶಗಳು ಹಾಗೂ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ್ದು, ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಅಭ್ಯಾಸ ಬೆಳೆಸಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಅವರು ಪುಸ್ತಕಗಳಲ್ಲಿ, ಜ್ಞಾನದಲ್ಲಿ ಹಾಗೂ ಅವರ ಚಿಂತನೆಗಳಲ್ಲಿ ಜೀವಂತವಾಗಿದ್ದಾರೆ. ಪ್ರತಿಯೊಂದು ಕುಟುಂಬವೂ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಅಧಿಕಾರಿಗಳು, ನ್ಯಾಯಾಧೀಶರು, ವೈದ್ಯರು ಹಾಗೂ ಇಂಜಿನಿಯರ್‍ಗಳಾಗಿ ರೂಪಿಸುವ ಮೂಲಕ ಅಂಬೇಡ್ಕರ್ ಅವರ ಕನಸಿನ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಮದ್ಯಪಾನ ಸೇರಿದಂತೆ ಸಮಾಜವನ್ನು ಹಾಳು ಮಾಡುವ ದುಶ್ಚಟಗಳಿಂದ ದೂರವಿದ್ದು, ಶಿಕ್ಷಣ, ಸಂವಿಧಾನ ಮತ್ತು ಮಾನವೀಯ ಮೌಲ್ಯಗಳತ್ತ ಯುವಕರು ಮುಖ ಮಾಡಬೇಕು. ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜದಲ್ಲಿ ಮತ್ತಷ್ಟು ವಿಸ್ತಾರವಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆ, ಶಿಕ್ಷಣ, ಸಾಮಾಜಿಕ ಸಮಾನತೆ, ಮಹಿಳಾ ಸಬಲೀಕರಣ, ಮತದಾನದ ಮಹತ್ವ ಹಾಗೂ ಸಂವಿಧಾನದ ಮೌಲ್ಯಗಳ ಕುರಿತು ಗಣ್ಯರು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಗೌರವ ಸಮರ್ಪಣೆ ಹಾಗೂ ಸಾರ್ವಜನಿಕ ಸನ್ಮಾನ ಕಾರ್ಯಕ್ರಮಗಳು ಜರುಗಿದವು.
ಗೋಪಿನಾಥ್ ಮೀಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮು ಪೂಜಾರಿ ವಂದಿಸಿದರು.
ಈ ಸಂದರ್ಭದಲ್ಲಿ ಅರ್ಜುನ್ ದಳವಾಯಿ, ಸುರೇಶ ನಡವಿನಮನಿ, ಶಶಿ ಮೀಶಿ, ಸಿದ್ದಾರ್ಥ ಚಿಮ್ಮ ಇದ್ಲಾಯಿ, ಪುಟ್ಟು ಪಾಣಿ, ಯಮನಪ್ಪ ಗುಣದಾಳ, ರಮೇಶ ಆಲಬಾಳ, ಶಿವಲಿಂಗ ಗೊಂಬಿಗೂಡ, ರಾಘವೇಂದ್ರ ಆಲಬಾಳ, ಪ್ರವೀಣ್ ಮೇಲಿನಕೇರಿ, ಮಹಾದೇವ ಕಡಕೋಳ, ರವಿ ಕಾಂಬಳೆ, ಡಾ. ಶಶಾಂಕ್ ವಳವಾಡೆ, ಚಣಬಸು ಗುಣದಾಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಬುದ್ಧ ವಿಹಾರ ನಿರ್ಮಾಣ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು






























