Home ಜಿಲ್ಲೆ ದೇಶ ಕಾಯುವಲ್ಲಿ ಯುವಕರು ಮುಂದಾಗಬೇಕು: ಮಂಜುನಾಥ ಜುನಗೊಂಡ

ದೇಶ ಕಾಯುವಲ್ಲಿ ಯುವಕರು ಮುಂದಾಗಬೇಕು: ಮಂಜುನಾಥ ಜುನಗೊಂಡ

ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೩೦: ಯುವಜನತೆ ದೇಶದ ಭದ್ರತೆ ಮತ್ತು ಸೇವೆಯ ಮಹತ್ವವನ್ನು ಅರಿತು ಭಾರತೀಯ ಸೇನೆಗೆ ಸೇರುವ ಮೂಲಕ ರಾಷ್ಟ್ರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಉಪನ್ಯಾಸಕ ಮಂಜುನಾಥ ಜುನಗೊಂಡ ಕರೆ ನೀಡಿದರು.
ನಗರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ ವಿಟ್ಟಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ತ್ಯಾಗವನ್ನು ಸ್ಮರಿಸಿದರು. ದೇಶದ ಗಡಿಯನ್ನು ಕಾಯುವ ಸೈನಿಕರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಗೌರವಯುತ ಸ್ಥಾನಮಾನ ನೀಡುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕ ಸತೀಶ ಕೋವಳ್ಳಿ ಅವರು ಭಾರತೀಯ ಸೇನೆಯಲ್ಲಿ ಕಳೆದ ತಮ್ಮ ೨೦ ವರ್ಷಗಳ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು. ಹಿಂದೆ ಸೈನಿಕರು ಸುಮಾರು ೪೫ ಕಿ.ಮೀ. ದೂರವನ್ನು ೫೦ ಕೆ.ಜಿ. ತೂಕದ ಸಾಮಗ್ರಿಯೊಂದಿಗೆ ಕ್ರಮಿಸಬೇಕಾಗುತ್ತಿತ್ತು. ಆದರೆ ಈಗ ಆಧುನಿಕ ತಂತ್ರಜ್ಞಾನದಿAದ ಸೈನಿಕರ ಮೇಲಿನ ಭಾರ ಕಡಿಮೆಯಾಗಿದ್ದು, ಸುಮಾರು ೮ ಕೆ.ಜಿ. ಸಾಮಗ್ರಿಯೊಂದಿಗೆ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದರು. ಕಾರ್ಗಿಲ್ ಪ್ರದೇಶದ ಕರ್ತವ್ಯ ಅತ್ಯಂತ ಸವಾಲಿನದ್ದಾಗಿದ್ದು, ದೇಶಸೇವೆಗೆ ಧೈರ್ಯ ಮತ್ತು ಸಮರ್ಪಣೆ ಅಗತ್ಯವೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್. ಮನೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕಾರ್ಯಕ್ರಮಾಧಿಕಾರಿ ರಾಜು ಕಪಾಲಿ ಅವರು ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ ಅವರು, ಶಿಕ್ಷಣದೊಂದಿಗೆ ದೇಶಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಧು ಕಾರ್ಯಕ್ರಮ ನಿರೂಪಿಸಿದರು. ನಿವೇದಿತಾ ಸ್ವಾಗತಿಸಿ, ಕೀರ್ತಿ ವಂದಿಸಿದರು