Home ಜಿಲ್ಲೆ ಸಚಿವ ಸಂಪುಟ ವಿಳಂಬಕ್ಕೆ ಸಿಎಂ ವಿರುದ್ಧ ಯತ್ನಾಳ ತೀವ್ರ ವಾಗ್ದಾಳಿ

ಸಚಿವ ಸಂಪುಟ ವಿಳಂಬಕ್ಕೆ ಸಿಎಂ ವಿರುದ್ಧ ಯತ್ನಾಳ ತೀವ್ರ ವಾಗ್ದಾಳಿ

ವಿಜಯಪುರ, ಜು. 30: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ದೇಶಪೂರ್ವಕವಾಗಿಯೇ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಚಿವ ಸಂಪುಟ ವಿಸ್ತರಣೆಯನ್ನು ವಿಳಂಬಗೊಳಿಸುತ್ತಾ ಹೋದರೆ ಹೆಚ್ಚಿನ ಇಲಾಖೆಗಳು ಮುಖ್ಯಮಂತ್ರಿಯವರ ಬಳಿಯೇ ಉಳಿಯುತ್ತವೆ. ಆಡಳಿತ ಮತ್ತು ಸಂಪನ್ಮೂಲಗಳ ಮೇಲಿನ ಸಂಪೂರ್ಣ ಹಿಡಿತ ಅವರ ಕೈಯಲ್ಲೇ ಇರುತ್ತದೆ. ಇದೇ ಉದ್ದೇಶದಿಂದ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗುತ್ತಿದೆ,” ಎಂದು ಕಿಡಿಕಾರಿದರು.
ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಬ್ಯುಸಿ ವೇಳಾಪಟ್ಟಿ ಹಾಗೂ ಸೋನಿಯಾ ಗಾಂಧಿಯವರ ಆರೋಗ್ಯದಂತಹ ಕಾರಣಗಳನ್ನು ಮುಂದಿಡಲಾಗುತ್ತಿದೆ ಎಂದು ಟೀಕಿಸಿದ ಯತ್ನಾಳ, “ರಾಜ್ಯದ ಅನೇಕ ಇಲಾಖೆಗಳಲ್ಲಿ ಸಚಿವರಿಲ್ಲದ ಕಾರಣ ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಅಧಿಕಾರಿಗಳೂ ‘ಸಚಿವರಿಲ್ಲ’ ಎಂಬ ನೆಪ ಹೇಳಿ ನಿರ್ಧಾರಗಳನ್ನು ಮುಂದೂಡುತ್ತಿದ್ದಾರೆ,” ಎಂದು ಆರೋಪಿಸಿದರು.
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ರಚಿಸಬೇಕು. ಆದರೆ ಇಲ್ಲಿ ಪ್ರತಿದಿನವೂ ಲಾಬಿ, ಓಡಾಟ ಮತ್ತು ಅಧಿಕಾರದ ಲೆಕ್ಕಾಚಾರವೇ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಬರದ ನಡುವೆ ಕೃಷಿ ಸಚಿವರೇ ಇಲ್ಲ’

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗುತ್ತಿದ್ದರೂ ಕೃಷಿ ಸಚಿವರೇ ಇಲ್ಲದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಯತ್ನಾಳ ಹೇಳಿದರು.
“ಮುಖ್ಯಮಂತ್ರಿ ಹೊಲಕ್ಕೆ ಹೋಗಿ ಫೆÇೀಟೋ ತೆಗೆಸಿಕೊಂಡರೆ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬರಬೇಕು. ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬರದ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

‘ಆಡಳಿತ ಒಂದೇ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕರಣ’

ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಒಂದೇ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗಿದೆ ಎಂದು ಆರೋಪಿಸಿದ ಅವರು, “ಇಂದು ಆಡಳಿತ ಎಂದರೆ ಡಿ.ಕೆ. ಶಿವಕುಮಾರ್ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೊಂದು ದಿನಗಳಾದರೂ ಸಚಿವ ಸಂಪುಟ ವಿಸ್ತರಣೆ ಆಗದಿರುವುದು ರಾಜ್ಯದ ಆಡಳಿತ ವ್ಯವಸ್ಥೆಗೆ ಅತ್ಯಂತ ದುರದೃಷ್ಟಕರ ಬೆಳವಣಿಗೆ,” ಎಂದು ವಾಗ್ದಾಳಿ ನಡೆಸಿದರು.