Home ಜಿಲ್ಲೆ ತುಮಕೂರು ವೈದ್ಯಕೀಯ ಶಿಕ್ಷಣದಲ್ಲಿ ನೈತಿಕತೆ-ಸಂವಹನ ಕುರಿತ ಕಾರ್ಯಾಗಾರ; ರೋಗಿಗಳ ಕುಟುಂಬ ಅನುಭವಿಸುವ ಭಾವನಾತ್ಮಕ ನೋವಿನ ಅರಿವು ವೈದ್ಯರಿಗೆ...

ವೈದ್ಯಕೀಯ ಶಿಕ್ಷಣದಲ್ಲಿ ನೈತಿಕತೆ-ಸಂವಹನ ಕುರಿತ ಕಾರ್ಯಾಗಾರ; ರೋಗಿಗಳ ಕುಟುಂಬ ಅನುಭವಿಸುವ ಭಾವನಾತ್ಮಕ ನೋವಿನ ಅರಿವು ವೈದ್ಯರಿಗೆ ಅಗತ್ಯ

ತುಮಕೂರು, ಜು. ೨೭- ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಔಷಧಶಾಸ್ತ್ರ ವಿಭಾಗ, ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಕರ್ನಾಟಕ ವೈದ್ಯಕೀಯ ಔಷಧಶಾಸ್ತ್ರಜ್ಞರ ಸಂಘದ ಸಹಯೋಗದಲ್ಲಿ ?ವೈದ್ಯಕೀಯ ಶಿಕ್ಷಣದಲ್ಲಿನ ಮನೋಭಾವ, ನೈತಿಕತೆ ಮತ್ತು ಸಂವಹನದ ಪರಿಣಾಮಗಳು ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.


ವೈದ್ಯಕೀಯ ಶಿಕ್ಷಣದ ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನ್‌ಗಳು ಮತ್ತು ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳನ್ನು ಸಮಾವೇಶಗೊಂಡು ಸಮಕಾಲೀನ ವೈದ್ಯಕೀಯ ಕಾರ್ಯಚಟುವಟಿಕೆಗಳಲ್ಲಿ ನೈತಿಕತೆ, ವೃತ್ತಿಪರತೆ ಮತ್ತು ಪರಿಣಾಮಕಾರಿ ಸಂವಹನದ ಮಹತ್ವದ ಕುರಿತು ಚರ್ಚಿಸಲಾಯಿತು.


ನಗರದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಸವ್ಯಸಾಚಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸಾಣಿಕೊಪ್ಪ, ವೈದ್ಯ-ರೋಗಿ ಸಂಬಂಧ, ಆರೋಗ್ಯ ಸೇವೆಯು ಒಂದು ಹಕ್ಕು ಎಂಬ ಪರಿಕಲ್ಪನೆ ಇರಬೇಕು. ಆರೋಗ್ಯ ಸೇವೆಯಲ್ಲಿನ ತಂಡದ ಕಾರ್ಯನಿರ್ವಹಣೆ ಮತ್ತು ಸಂವಹನ ಕೌಶಲಗಳು ಪ್ರಮುಖ ಪಾತ್ರ ವಹಿಸುತ್ತವೆ. ವೈದ್ಯರು ಮತ್ತು ಉದ್ಯಮ ವಲಯದ ನಡುವಿನ ವೃತ್ತಿಪರ ಮಿತಿಗಳು ಹಾಗೂ ರೋಗಿಗಳ ಕುಟುಂಬಗಳು ಅನುಭವಿಸುವ ಭಾವನಾತ್ಮಕ ಒತ್ತಡವನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.


ಉಪ ಪ್ರಾಂಶುಪಾಲರಾದ ಡಾ,ಪ್ರಭಾಕರ್ ಮಾತನಾಡಿ, ಪರಿಣಿತರ ಉಪನ್ಯಾಸಗಳು ಮತ್ತು ವಿದ್ಯಾರ್ಥಿಗಳ ವೈಜ್ಞಾನಿಕ ಪ್ರಸ್ತುತಿಗಳು ಸಮರ್ಥ ಹಾಗೂ ಸಹಾನುಭೂತಿಯುಳ್ಳ ವೈದ್ಯಕೀಯ ಪದವೀಧರರನ್ನು ರೂಪಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ. ಪ್ರಾಮಾಣಿಕತೆ, ವೃತ್ತಿಪರತೆ ಮತ್ತು ರೋಗಿ-ಕೇಂದ್ರಿತ ಆರೈಕೆಯ ಮಹತ್ವವನ್ನು ಈ ಕಾರ್ಯಕ್ರಮವು ಎತ್ತಿ ತೋರಿಸಿತು ಎಂದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಟಿ. ನಂದಿನಿ, ಕಾರ್ಯಕ್ರಮವು ಸಾಂಪ್ರದಾಯಿಕ ‘ಸದ್ವೃತ್ತ’ (ಸದಾಚಾರ) ಪರಿಕಲ್ಪನೆಯನ್ನು ಆಧುನಿಕ ವೈದ್ಯಕೀಯ ಶಿಕ್ಷಣದೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದೆ. ಸಹಾನುಭೂತಿ, ಪ್ರಾಮಾಣಿಕತೆ, ಹೊಣೆಗಾರಿಕೆ ಮತ್ತು ಗೌರವದಂತಹ ಶಾಶ್ವತ ಮೌಲ್ಯಗಳು ಗುಣಮಟ್ಟದ ಆರೋಗ್ಯ ಸೇವೆಯ ಮೂಲಾಧಾರವಾಗಿ ಮುಂದುವರಿದಿವೆ ಎಂಬುದನ್ನು ಕಾರ್ಯಾಗಾರದಲ್ಲಿ ಸಾಬೀತುಪಡಿಸಲಾಗುತ್ತದೆ. ನೈತಿಕ ವೈದ್ಯಕೀಯ ಅಭ್ಯಾಸ, ವೃತ್ತಿಪರತೆ ಮತ್ತು ಆರೋಗ್ಯ ಶಿಕ್ಷಣದಲ್ಲಿ ಶ್ರೇಷ್ಟತೆಯನ್ನು ಉತ್ತೇಜಿಸುವ ಶೈಕ್ಷಣಿಕ ಉಪಕ್ರಮಗಳನ್ನು ಆಯೋಜಿಸುವ ಮೂಲಕ ವೈದ್ಯಕೀಯ ಶಿಕ್ಷಣದಲ್ಲಿ ಬದ್ಧತೆಯನ್ನು ಪುನರುಚ್ಚರಿಸಲಾಗುತ್ತದೆ ಎಂದರು.


ವೈಜ್ಞಾನಿಕ ಗೋಷ್ಠಿಯಲ್ಲಿ ತಜ್ಞ ವೈದ್ಯರಾದ ಡಾ. ಸುಧಾ ಎಂ. ಜೆ. ಅವರು “ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ನೈತಿಕ ಆಯ್ಕೆಗಳು” ಎಂಬ ವಿಷಯದಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ದಿನನಿತ್ಯದ ವೈದ್ಯಕೀಯ ತರಬೇತಿಯಲ್ಲಿ ನೈತಿಕ ಚಿಂತನೆ, ವೃತ್ತಿಪರತೆ ಮತ್ತು ಆತ್ಮಾವಲೋಕನ ಸಹಿತ ಅಭ್ಯಾಸವನ್ನು ಅಳವಡಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು ಎಂದರು.


ವೈದ್ಯರಾದ ಡಾ. ಸುಬ್ರಹ್ಮಣ್ಯ ಕಟ್ಟೆಪುರ ಅವರು ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ? ಕುರಿತಾದ ಪ್ರಮುಖ ಒಳನೋಟಗಳನ್ನು ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಡುವಾ, ವೈದ್ಯಕೀಯ ಅಧೀಕ್ಷಕರುಗಳಾದ ಡಾ.ಎನ್.ಎಸ್. ವೆಂಕಟೇಶ್, ಡಾ.ರಾಜೇಶ್ವರಿ ದೇವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕಿರಣ್ ಕುಮಾರ್, ಪರಿಕ್ಷಾಂಗ ನಿಯಂತ್ರಕರಾದ ಡಾ. ಕೆ.ಸುನಿಲ್, ಪ್ರಾಧ್ಯಾಪಕರಾದ ಡಾ. ನವೀನ್‌ಕುಮಾರ್, ಡಾ ಸುಬ್ರಮಣ್ಯ, ಡಾ.ಮಂಜುನಾಥ್, ಡಾ.ಸ್ವಾಮಿ, ಡಾ.ಸುಷ್ಮಾ, ಡಾ.ನರಸಿಂಹ ಮೂರ್ತಿ, ಡಾ.ಪ್ರತಿಭಾ, ಡಾ.ಅರುಣ್ ಹೆಬ್ಬಾರ್ ಮತ್ತಿತರರು ಭಾಗವಹಿಸಿದ್ದರು.