
ಬೆಂಗಳೂರು : ಯುವ ಮಾನವ ಕ್ಯಾಲ್ಕುಲೇಟರ್ ಹಾಗೂ ಗಣಿತ ಮತ್ತು ಸಾಮಾನ್ಯ ಜ್ಞಾನ ವಿಭಾಗಗಳಲ್ಲಿ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿರುವ ಮಾಸ್ಟರ್ ಪ್ರಣವ್ ಸಿ.ಗೌಡ ಅವರು ಲೋಕಭವನದಲ್ಲಿ ಕರ್ನಾಟಕ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ದಿನಾಂಕ 04.08.2026ರಂದು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಮಾಸ್ಟರ್ ಪ್ರಣವ್ ಸಿ. ಗೌಡ ಅವರ ಪೋಷಕರು ಅವರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಿ, ಅವರ ಮುಂದಿನ ಶೈಕ್ಷಣಿಕ ಹಾಗೂ ಪ್ರತಿಭಾ ವಿಕಸನದ ಪ್ರಯತ್ನಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವಂತೆ ಮನವಿ ಸಲ್ಲಿಸಿದರು.
ರಾಜ್ಯಪಾಲರು ಮಾಸ್ಟರ್ ಪ್ರಣವ್ ಅವರ ಅಸಾಧಾರಣ ಪ್ರತಿಭೆ ಮತ್ತು ಸಾಧನೆಗಳನ್ನು ಶ್ಲಾಘಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ತಮ್ಮ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಂಡು ಕರ್ನಾಟಕ ಹಾಗೂ ದೇಶಕ್ಕೆ ಇನ್ನಷ್ಟು ಕೀರ್ತಿ ತರುವಂತೆ ಅವರು ಪ್ರೋತ್ಸಾಹಿಸಿದರು.

































