
ವಿಜಯಪುರ, ಆ.1:ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಂತಿಮ ಘಟ್ಟ ತಲುಪುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ತೆರೆಮರೆಯ ಚಟುವಟಿಕೆಗಳು ಚುರುಕುಗೊಂಡಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದಿರುವ ಸವಾಲು ಕೇವಲ ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದಲ್ಲ; ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಪಡಿಸುವುದು, ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವುದು, ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಹಾಗೂ ಅಧಿಕಾರ ಮತ್ತು ಸಂಘಟನೆಯ ನಡುವಿನ ಸಮೀಕರಣವನ್ನು ಸಮತೋಲನದಲ್ಲಿ ಇಡುವುದಾಗಿದೆ.
ಈ ಎಲ್ಲ ಲೆಕ್ಕಾಚಾರಗಳ ನಡುವೆ ಉತ್ತರ ಕರ್ನಾಟಕದ ರಾಜಕೀಯದಲ್ಲಿ ಪ್ರಭಾವಿ ಜಿಲ್ಲೆಯಾದ ವಿಜಯಪುರ ಕಾಂಗ್ರೆಸ್ ಹೈಕಮಾಂಡ್‍ನ ಗಮನ ಸೆಳೆದಿದೆ. ಜಿಲ್ಲೆಗೆ ಈಗಾಗಲೇ ಒಬ್ಬ ಸಚಿವರಿದ್ದರೂ, ಎರಡನೇ ಸಚಿವ ಸ್ಥಾನ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆಯೇ? ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಆರು ಕಾಂಗ್ರೆಸ್ ಶಾಸಕರು… ಒಬ್ಬ ಸಚಿವ ಮಾತ್ರ!
ವಿಜಯಪುರ ಜಿಲ್ಲೆಯ ರಾಜಕೀಯ ಚಿತ್ರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಕಾಂಗ್ರೆಸ್ ಪರವಾದ ಜನಾದೇಶ ಎಷ್ಟು ಪ್ರಬಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿವೆ.
ಆದರೆ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಬೆಳವಣಿಗೆ ಜಿಲ್ಲೆಯ ರಾಜಕೀಯ ಸಮೀಕರಣವನ್ನೇ ಬದಲಿಸಿದೆ. ವಿರೋಧ ಪಕ್ಷದ ರಾಜಕೀಯ ಶಕ್ತಿ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ನಿರ್ಣಾಯಕ ರಾಜಕೀಯ ಮೇಲುಗೈ ಇದೆ.
ಈ ಕಾರಣಕ್ಕಾಗಿಯೇ, ಆರು ಕಾಂಗ್ರೆಸ್ ಶಾಸಕರಿರುವ ಜಿಲ್ಲೆಗೆ ಒಬ್ಬ ಸಚಿವ ಮಾತ್ರ ಏಕೆ? ಎಂಬ ಪ್ರಶ್ನೆ ಪಕ್ಷದೊಳಗೆ ಮಾತ್ರವಲ್ಲ, ರಾಜಕೀಯ ವಿಶ್ಲೇಷಕರಲ್ಲಿಯೂ ಕೇಳಿಬರುತ್ತಿದೆ.
ಎಂ.ಬಿ. ಪಾಟೀಲ ಪ್ರಭಾವ… ಎರಡನೇ ಸ್ಥಾನಕ್ಕೆ ಅಡ್ಡಿಯೇ ಅಥವಾ ಬಲವೇ?
ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರು. ಮುಖ್ಯಮಂತ್ರಿ ನಂತರ ಸರ್ಕಾರದ ನೀತಿ ನಿರ್ಧಾರಗಳಲ್ಲಿ ಪ್ರಭಾವ ಬೀರುವ ನಾಯಕರ ಸಾಲಿನಲ್ಲಿ ಅವರ ಹೆಸರು ಕೇಳಿಬರುತ್ತದೆ. ಕೈಗಾರಿಕೆ, ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಮುನ್ನಡೆಸುತ್ತಿರುವ ಅವರು ವಿಜಯಪುರ ಜಿಲ್ಲೆಯ ಪ್ರಮುಖ ರಾಜಕೀಯ ಮುಖ.
ಆದರೆ ಇದೇ ಸಂದರ್ಭದಲ್ಲಿ ಹೈಕಮಾಂಡ್ ಎದುರು ಎರಡು ಪ್ರಶ್ನೆಗಳು ನಿಂತಿವೆ.
ಈಗಾಗಲೇ ಒಬ್ಬ ಪ್ರಭಾವಿ ಸಚಿವರಿರುವ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೇ?
ಅಥವಾ ಆರು ಕಾಂಗ್ರೆಸ್ ಶಾಸಕರಿರುವ ಜಿಲ್ಲೆಗೆ ರಾಜಕೀಯ ನ್ಯಾಯ ಒದಗಿಸಲು ಎರಡನೇ ಸ್ಥಾನ ಅನಿವಾರ್ಯವೇ?
ಈ ಪ್ರಶ್ನೆಗಳ ಉತ್ತರವೇ ವಿಜಯಪುರದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.
ಶಿವಾನಂದ್ ಪಾಟೀಲ: ಅನುಭವದ ಟ್ರಂಪ್ ಕಾರ್ಡ್
ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಾನಂದ ಪಾಟೀಲ ಅವರಿಗೆ ಆಡಳಿತ ಅನುಭವವೇ ದೊಡ್ಡ ಬಲವಾಗಿದೆ. ಇಲಾಖೆಗಳ ನಿರ್ವಹಣೆ, ಸಂಘಟನೆಯಲ್ಲಿ ಸಕ್ರಿಯ ಪಾತ್ರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಇರುವ ರಾಜಕೀಯ ಹೊಂದಾಣಿಕೆ ಅವರನ್ನು ಸಚಿವ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯನ್ನಾಗಿ ಮಾಡಿದೆ.
ಆದರೆ ಮತ್ತೊಂದೆಡೆ, ಈಗಾಗಲೇ ಜಿಲ್ಲೆಯ ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿ ಎಂ.ಬಿ. ಪಾಟೀಲ ಸಂಪುಟದಲ್ಲಿರುವ ಸಂದರ್ಭದಲ್ಲಿ, ಮತ್ತೆ ಅದೇ ಸಮುದಾಯದ ಮತ್ತೊಬ್ಬರಿಗೆ ಅವಕಾಶ ನೀಡುವ ವಿಚಾರದಲ್ಲಿ ಹೈಕಮಾಂಡ್ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಯಶವಂತರಾಯಗೌಡ ಪಾಟೀಲ: ಹೊಸ ನಾಯಕತ್ವದ ಮುಖ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಕಾಂಗ್ರೆಸ್ ಭವಿಷ್ಯದ ನಾಯಕತ್ವದ ಭಾಗವಾಗಿ ಪರಿಗಣಿಸುತ್ತಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಯುವ ನಾಯಕತ್ವಕ್ಕೆ ಆದ್ಯತೆ, ಉತ್ತರ ಕರ್ನಾಟಕದಲ್ಲಿ ಹೊಸ ಮುಖಗಳಿಗೆ ಅವಕಾಶ ಮತ್ತು ಸಂಘಟನೆಯಲ್ಲಿ ಅವರ ಪಾತ್ರ ಅವರನ್ನು ಸಚಿವ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯನ್ನಾಗಿಸಿದೆ. ಯಶವಂತರಾಯಗೌಡರಿಗೆ ಸಚಿವ ಸ್ಥಾನ ಅದೃಷ್ಟ ಒಲಿದರೂ ಅಚ್ಚರಿಯಿಲ್ಲ.
ಸಿ. ಎಸ್. ನಾಡಗೌಡ ಅಪ್ಪಾಜಿ : ಹಿರಿಯರಿಗೆ ಗೌರವ ಸಿಗುತ್ತದೆಯೇ?
ಮುದ್ದೇಬಿಹಾಳ ಶಾಸಕ ಅಪ್ಪಾಸಾಹೇಬ ನಾಡಗೌಡ ಹಲವು ದಶಕಗಳ ರಾಜಕೀಯ ಅನುಭವ ಹೊಂದಿದ್ದಾರೆ. ಹಿರಿಯ ಶಾಸಕರಿಗೆ ನ್ಯಾಯ ನೀಡುವ ಸಂದೇಶ ನೀಡಬೇಕೆಂದು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದರೆ, ಅವರ ಹೆಸರು ಕೂಡ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಹೈಕಮಾಂಡ್ ಲೆಕ್ಕಾಚಾರದಲ್ಲಿ ವಿಜಯಪುರ ಮಾತ್ರವಲ್ಲ…
ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ ವರಿಷ್ಠರು ಕೇವಲ ವಿಜಯಪುರವನ್ನಷ್ಟೇ ಪರಿಗಣಿಸುತ್ತಿಲ್ಲ. ಉತ್ತರ ಕರ್ನಾಟಕದ ಪ್ರಾತಿನಿಧ್ಯ, ಹಿಂದುಳಿದ ವರ್ಗಗಳು, ದಲಿತ, ಅಲ್ಪಸಂಖ್ಯಾತ, ಮಹಿಳಾ ಪ್ರಾತಿನಿಧ್ಯ, ಪ್ರಾದೇಶಿಕ ಸಮತೋಲನ ಹಾಗೂ ಮುಂದಿನ ಚುನಾವಣೆಯ ರಾಜಕೀಯ ತಂತ್ರ-ಈ ಎಲ್ಲ ಅಂಶಗಳು ಅಂತಿಮ ನಿರ್ಧಾರದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ.
ಒಂದು ಜಿಲ್ಲೆಗೆ ಎರಡನೇ ಸಚಿವ ಸ್ಥಾನ ನೀಡಿದರೆ, ಇದೇ ಬೇಡಿಕೆ ಇತರ ಜಿಲ್ಲೆಗಳಲ್ಲೂ ಬಲಗೊಳ್ಳುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ.
ಅಂತಿಮ ಪ್ರಶ್ನೆ… ವಿಜಯಪುರದ ಅದೃಷ್ಟ ಏನು?
ವಿಜಯಪುರಕ್ಕೆ ಎರಡನೇ ಸಚಿವ ಸ್ಥಾನ ದೊರೆತರೆ ಅದು ಜಿಲ್ಲೆಯ ರಾಜಕೀಯ ಪ್ರಭಾವವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ದೊರೆಯದಿದ್ದರೆ, ಏಳು ಕಾಂಗ್ರೆಸ್ ಶಾಸಕರಿದ್ದರೂ ಸಮರ್ಪಕ ಪ್ರಾತಿನಿಧ್ಯ ಸಿಗಲಿಲ್ಲ ಎಂಬ ಅಸಮಾಧಾನ ಪಕ್ಷದೊಳಗೆ ಮೂಡುವ ಸಾಧ್ಯತೆಯೂ ಇದೆ.
ಸದ್ಯದ ರಾಜಕೀಯ ಚಿತ್ರಣ ನೋಡಿದರೆ, ವಿಜಯಪುರ ಜಿಲ್ಲೆಗೆ ಎರಡನೇ ಸಚಿವ ಸ್ಥಾನ ದೊರೆಯುವುದೇ ಮೊದಲ ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ‘ಹೌದು’ ಆದರೆ, ಮುಂದಿನ ಪ್ರಶ್ನೆ-ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ಅಥವಾ ಅಪ್ಪಾಸಾಹೇಬ ನಾಡಗೌಡ… ಕಾಂಗ್ರೆಸ್ ಹೈಕಮಾಂಡ್‍ನ ಆಯ್ಕೆ ಯಾರ ಮೇಲೆ ಬೀಳಲಿದೆ?
ಸಚಿವ ಸಂಪುಟ ವಿಸ್ತರಣೆಯ ಅಧಿಕೃತ ಪಟ್ಟಿ ಹೊರಬೀಳುವ ಕ್ಷಣದಿಂದಲೇ ವಿಜಯಪುರ ಜಿಲ್ಲೆಯ ರಾಜಕೀಯ ಹೊಸ ತಿರುವು ಪಡೆಯಲಿದೆ. ಈ ನಿರ್ಧಾರ ಕೇವಲ ಒಬ್ಬ ಶಾಸಕರ ರಾಜಕೀಯ ಭವಿಷ್ಯವನ್ನಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಮುಂದಿನ ರಾಜಕೀಯ ದಿಕ್ಕನ್ನೂ ನಿರ್ಧರಿಸುವ ಸಾಧ್ಯತೆಯಿದೆ.






























