Home ಮುಖಪುಟ ಸುದ್ದಿ ಎಸ್‌ಐಆರ್ ನಿಯಮ ಉಲ್ಲಂಘನೆ ಯಾರ ಕೈವಾಡ

ಎಸ್‌ಐಆರ್ ನಿಯಮ ಉಲ್ಲಂಘನೆ ಯಾರ ಕೈವಾಡ

ಅಶೋಕ್ ಪ್ರಶ್ನೆ

ಬೆಂಗಳೂರು, ಜು. ೩- ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಈ ರೀತಿ ಗಾಳಿಗೆ ತೂರುತ್ತಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ಪ್ರತಿಪಕ್ಷ ನಾಯಕ ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಪಾವಿತ್ರ್ಯವನ್ನು ಹಳ್ಳ ಹಿಡಿಸುವಂತಹ ಗಂಭೀರ ಅಕ್ರಮಗಳು ರಾಜ್ಯದ ಹಲವೆಡೆ ಬೆಳಕಿಗೆ ಬರುತ್ತಿವೆ.


ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕೆಂಬ ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಯನ್ನು ಕಡೆಗಣಿಸಿ, ಅಪಾರ್ಟ್‌ಮೆಂಟ್‌ಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ನಿವಾಸಿಗಳನ್ನು ಗುಂಪು ಗುಂಪಾಗಿ ಸೇರಿಸಿ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿರುವ ವರದಿಗಳು ಬಹಿರಂಗವಾಗಿವೆ. ಎಂದಿದ್ದಾರೆ

ಇದರ ನಡುವೆ, ಸೈಬರ್ ಕೇಂದ್ರಗಳಲ್ಲಿ ನಕಲಿ ಜನನ ಪ್ರಮಾಣಪತ್ರಗಳು, ವಾಸಸ್ಥಳ ದೃಢೀಕರಣ ಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸೃಷ್ಟಿಸುವ ದಂಧೆ ನಿರಾತಂಕವಾಗಿ ನಡೆಯುತ್ತಿರುವ ಆರೋಪಗಳೂ ಕೇಳಿಬರುತ್ತಿವೆ.


ಒಂದು ಕಡೆ ಚುನಾವಣಾ ಆಯೋಗದ ನಿಯಮಗಳನ್ನೇ ಬುಡಮೇಲು ಮಾಡಿ ಗುಂಪು ಗುಂಪಾಗಿ ಅರ್ಜಿಗಳನ್ನು ಭರ್ತಿ ಮಾಡಲಾಗುತ್ತಿದೆ. ಮತ್ತೊಂದು ಕಡೆ ನಕಲಿ ದಾಖಲೆಗಳ ಮೂಲಕ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಎಂದು ದೂರಿದ್ದಾರೆ


ಇಷ್ಟೆಲ್ಲಾ ಬೆಳವಣಿಗೆಗಳು ನಿಮ್ಮ ಸರ್ಕಾರದ ಮೂಗಿನ ನೇರದಲ್ಲೇ ನಡೆಯುತ್ತಿದ್ದರೂ ಸರ್ಕಾರ ಮತ್ತು ಪೊಲೀಸರು ಮೌನವಾಗಿರುವುದು ಏಕೆ?
ಇದರ ಹಿಂದೆ ಯಾರನ್ನಾದರೂ ರಕ್ಷಿಸುವ ಹುನ್ನಾರ ಅಡಗಿದೆಯೇ ಎಂದು ಪ್ರಶ್ನಿಸಿರುವ ಅವರು


ತಕ್ಷಣವೇ ಗುಂಪು ಗುಂಪಾಗಿ ಅಕ್ರಮವಾಗಿ ಅರ್ಜಿ ಭರ್ತಿ ಮಾಡಿಸುತ್ತಿರುವವರ ವಿರುದ್ಧ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲದ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲವಾದರೆ ಈ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆಯೇ ರಾಜ್ಯದ ಜನತೆ ಪ್ರಶ್ನೆ ಎತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂದಿದ್ದಾರೆ


ಪ್ರಜಾಪ್ರಭುತ್ವದ ತಳಹದಿಯಾದ ಮತದಾರರ ಪಟ್ಟಿಯ ಪಾವಿತ್ರ್ಯಕ್ಕೆ ಧಕ್ಕೆ ತಂದರೆ, ರಾಜ್ಯಾದ್ಯಂತ ತೀವ್ರ ಜನಾಂದೋಲನ ನಡೆಸುವುದು ಅನಿವಾರ್ಯ ಹೋಗುತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ .