
ಬೆಂಗಳೂರು,ಜು.೩- ಕ್ವಾರಿಯಲ್ಲಿ ಏಕಾಏಕಿ ಕಲ್ಲುಬಂಡೆ ಕುಸಿದು ಬಿದ್ದು ಏಳು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ರಷರ್ ಹಾಗೂ ಕ್ವಾರಿ ಇನ್ ಚಾರ್ಜ್ ಲೋಕೇಶ್ ಹಾಗೂ ಕಾವೇರಿ ಕ್ರಷರ್ ನ ಲೋಕಲ್ ಇನ್ ಚಾರ್ಜ್ ರಾಜು ಬಂಧಿತ ಆರೋಪಿಗಳಾಗಿದ್ದು, ಮೂವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
ದುರಂತದಲ್ಲಿ ಬದುಕುಳಿದ ಕಾರ್ಮಿಕ ಗೋಪಿಕೃಷ್ಣನ್ ಟಿ. ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ.
ಮೂರು ಟ್ರ್ಯಾಕ್ಟರ್ ಜಖಂ:
ಘಟನೆಯ ದಿನದಂದು ಕ್ವಾರಿಯ ಕೆಳಭಾಗದಲ್ಲಿ ಒಟ್ಟು ೧೬ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಕೇಂದ್ರ ವಲಯದ ಐಜಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. ಅವರ ಮೇಲೆ ಏಕಾಏಕಿ ಬೃಹತ್ ಬಂಡೆ ಉರುಳಿದ ಕಾರಣ ರಾಮು (೪೬), ರಾಜಪಾಲ್ ಸಿಂಗ್ (೩೫), ಸತ್ಯನಾರಾಯಣ ಸಿಂಗ್ (೩೧), ರಾಮ ವತಾರ್ ಸಿಂಗ್ (೩೧), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಂಡೆ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಮೂರು ಟ್ರ್ಯಾಕ್ಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ಇನ್ನುಳಿದ ಗಾಯಾಳುಗಳಾದ ಗುಲಾಬ್ ಸಿಂಗ್, ರಾಜ್ ಪಾಲ್, ಚೋಟು, ನೋಹರ್ ಸಿಂಗ್ ಮತ್ತು ಆನಂದ್ ಅವರನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಮಾಲೀಕನಿಗೆ ಶೋಧ:
ಪೊಲೀಸರು ಪ್ರಕರಣದ ಸಂಬಂಧ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರೂ, ದುರಂತ ನಡೆದ ಕಾವೇರಿ ಕ್ರಷರ್‌ನ ಅಸಲಿ ಮಾಲೀಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲೀಕ ಡಿ. ಆನಂದಸ್ವಾಮಿ ಹಾಗೂ ಹಿಟಾಚಿ ಚಾಲಕ ತಿರುಪತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಪ್ರಮುಖ ಮಾಲೀಕರು ತಲೆಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


























