Home ಮುಖಪುಟ ಸುದ್ದಿ ತೆಲಂಗಾಣ ಡಿಎಸ್‌ಪಿ ಬಳಿ ೨೦೦ ಕೋಟಿ ಅಕ್ರಮ ಆಸ್ತಿಪಾಸ್ತಿ

ತೆಲಂಗಾಣ ಡಿಎಸ್‌ಪಿ ಬಳಿ ೨೦೦ ಕೋಟಿ ಅಕ್ರಮ ಆಸ್ತಿಪಾಸ್ತಿ

ಹೈದರಾಬಾದ್, ಜು.೩: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಂಕೀರೆಡ್ಡಿ ಭೀಮ್ ರೆಡ್ಡಿ ಮನೆ ಮೇಲೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ.


ಸದ್ಯ ಭ್ರಷ್ಟಾಚಾರ ನಿಗ್ರಹ ದಳದ ದಾಳಿಯ ವೇಳೆ ತೆಲಂಗಾಣ, ಕರ್ನಾಟಕ ಸೇರಿದಂತೆ ೫೦ ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, ೨೦೦ ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದ್ದು, ಕೋಟಿ ಕೋಟಿ ಅಕ್ರಮ ಆಸ್ತಿಯ ವಿವರ ನೋಡಿ ಇಡೀ ಪೊಲೀಸ್ ಇಲಾಖೆಯೇ ದಂಗಾಗಿದೆ.


ಇನ್ನು ದಾಳೆ ವೇಳೆ ಭೀಮ್ ರೆಡ್ಡಿ ಆಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ ೨೦೦ ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದ್ದು. ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶಗಳಾದ ಗಚಿಬೌಲಿ, ಮಣಿಕೊಂಡ, ಇಬ್ರಾಹಿಂಬಾಗ್ ಮತ್ತು ತೆಲ್ಲಾಪುರದಲ್ಲಿ ಐಷಾರಾಮಿ ವಿಲ್ಲಾಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಹಲವು ಫ್ಲಾಟ್‌ಗಳನ್ನು ಹೊಂದಿದ್ದಾರೆ.

ಇದರಲ್ಲಿ ಜಿ+೨ ಅಂತಸ್ತಿನ ಪೆಂಟ್‌ಹೌಸ್ ಮತ್ತು ೩,೦೦೦ ಚದರ ಅಡಿಯ ವಾಣಿಜ್ಯ ಮಳಿಗೆಗಳೂ ಸೇರಿವೆ.ಜೊತೆಗೆ ಕರ್ನಾಟಕದಲ್ಲಿ ೪೪ ಎಕರೆ ಮತ್ತು ಬೆಂಗಳೂರಿನ ದೇವನಹಳ್ಳಿಯಲ್ಲಿ ೧ ಎಕರೆ ಸೇರಿದಂತೆ ಒಟ್ಟು ೫೦ ಎಕರೆಗೂ ಅಧಿಕ ಕೃಷಿ ಭೂಮಿಯ ದಾಖಲೆಗಳು ಸಿಕ್ಕಿವೆ. ಜೊತೆಗೆ ಶೋಧ ಕಾರ್ಯದ ವೇಳೆ ಮನೆಯಲ್ಲಿ ಅಂದಾಜು ೩.೬೦ ಲಕ್ಷ ನಗದು ಮತ್ತು ಅವರ ಬೆನಾಮಿ ಮನೆಯಲ್ಲಿ ೪೦ ಲಕ್ಷ ರೂ. ನಗದು ಪತ್ತೆಯಾಗಿದೆ. ಇದರೊಂದಿಗೆ ಸುಮಾರು ೨ ಕೆಜಿ ಚಿನ್ನದ ಆಭರಣಗಳು, ೨೦ ಕೆಜಿ ಬೆಳ್ಳಿ ವಸ್ತುಗಳು ಮತ್ತು ವಿವಿಧ ಖಾತೆಗಳಲ್ಲಿದ್ದ ಒಟ್ಟು ೧೯ ಲಕ್ಷದ ೯೧ ಸಾವಿರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪತ್ತೆಹಚ್ಚಲಾಗಿದೆ.

ದಾಖಲೆಗಳಲ್ಲಿ ನಮೂದಾಗಿರುವ ಈ ಎಲ್ಲಾ ಸ್ಥಿರ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ದಾಖಲೆಗಳ ಮೌಲ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗಿರಬಹುದು ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಡಿಎಸ್‌ಪಿ ಭೀಮ್ ರೆಡ್ಡಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಭೀಮ್ ರೆಡ್ಡಿ ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಮಾರ್ಗಗಳ ಮೂಲಕ ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಎಸಿಬಿ ತಿಳಿಸಿದೆ.