
ಬೆಂಗಳೂರು, ಸೆ.೨೭: ಬಿಡದಿ ಟೌನ್ಶಿಪ್ ವಿರೋಧಿಸಿ “ಕಳೆದ ಐದು ದಿನಗಳಿಂದ ಅಮರಣಾಂತ ಉಪವಾಸ ಮಾಡುತ್ತಿದ್ದ ರೈತರ ಮೇಲೆ ಏಕಾಏಕಿ ಸುಮೋಟೊ ಕೇಸ್ ಹಾಕಲಾಗಿದೆ. ಐದು ದಿನ ಪ್ರತಿಭಟನೆ ಮಾಡುವಾಗ ಏಕೆ ಮೌನವಾಗಿದ್ದಿರಿ ಹೋರಾಟ ಹತ್ತಿಕ್ಕಲು ಈ ಪ್ರಯತ್ನ. ನಾವು ರೈತರ ಪರವಾಗಿಯೇ ನಿಲ್ಲುತ್ತೇವೆ” ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಡದಿ ರೈತರ ಮೇಲೆ ದಾಖಲಿಸಿರುವ ಎಫ್‌ಐಆರ್ ಸಂಬಂಧ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರೈತ ಸ್ವಾಭಿಮಾನ ಯಾತ್ರೆಗೆ ಬೆಂಬಲ :
“ರೈತರಿಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೈತ ಸ್ವಾಭಿಮಾನ ಯಾತ್ರೆ ಮಾಡುತ್ತಿದ್ದಾರೆ . ರೈತರ ಜೊತೆ ಬೆಂಬಲವಾಗಿ ನಿಲ್ಲಲು ನಾವು ಯಾವಾಗಲೂ ಸಿದ್ಧ. ನೀವು ಜನರ ಪರವಾಗಿ ಕೆಲಸ ಮಾಡುತ್ತೀರಾ ನೀವೇ ಇನ್ನೂ ಹತ್ತು ವರ್ಷ ಅಧಿಕಾರದಲ್ಲಿರಿ, ನಾನೇ ೫೦ ಸಾವಿರ ಜನರನ್ನು ಸೇರಿಸಿ ನಿಮಗೆ ಸನ್ಮಾನ ಮಾಡುತ್ತೇನೆ. ಆದರೆ ದುಡ್ಡು ಹೊಡೆಯಲು ಮುಂದಾದರೆ ಅಡ್ಡಗಾಲು ಹಾಕುತ್ತೇನೆ” ಎಂದು ಕುಮಾರಸ್ವಾಮಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು
ಕೊಟ್ಟಿರುವ ಅಧಿಕಾರ ಕಳ್ಳಕಾಕರನ್ನು ರಕ್ಷಣೆ ಮಾಡಲು ಅಲ್ಲ. ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. ಸ್ವಲ್ಪ ತಡೆಯಿರಿ, ಎಲ್ಲಕ್ಕೂ ಒಂದು ಕಾಲ ಬರುತ್ತದೆ. ಸ್ಯಾಚುರೇಷನ್ ಪಾಯಿಂಟ್ ತಲುಪಿದ್ದೀರಿ, ಇನ್ನೇನು ಕೊನೆಯಾಗುತ್ತದೆ. ಕಾಯುತ್ತಿರಿ. ನನ್ನ ಬಳಿ ಇರುವ ವಿಚಾರಗಳನ್ನು ಕೊಟ್ಟರೆ ದಿನಕ್ಕೊಂದು ಸುದ್ದಿಯಾಗುತ್ತದೆ” ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ರೈತರಿಗೆ ೨೫೦೦ ರೂ. ಸಬ್ಸಿಡಿ ಕುರಿತು ಕುಮಾರಸ್ವಾಮಿ ಟೀಕೆ:
ಕೇಂದ್ರ ಸರ್ಕಾರವು ರೈತರಿಗೆ ನೀಡುತ್ತಿರುವ ೨೫೦೦ ರೂ. ಸಬ್ಸಿಡಿ ಬಗ್ಗೆ ಮಾತನಾಡಿದ ಅವರು, “ನಾನು ಎರಡು ಬಾರಿ ಸಿಎಂ ಆಗಿದ್ದಾಗಲೂ ಕೇಂದ್ರದ ಮುಂದೆ ಕೈ ಚಾಚಲಿಲ್ಲ. ಈಗ ರೈತರಿಗೆ ಎರಡೂವರೆ ಸಾವಿರ ಸಬ್ಸಿಡಿ ಕೊಟ್ಟು ಕೇಂದ್ರದ ಮುಂದೆ ಕೈ ಚಾಚುತ್ತಿದ್ದಾರೆ. ನನ್ನ ಸರ್ಕಾರದಲ್ಲಿಯೇ ಕಬ್ಬು ಬೆಳೆಗಾರರಿಗೆ ೨೮ ಸಾವಿರ ಕೋಟಿ ಪರಿಹಾರ ನೀಡಲಾಗಿತ್ತು. ಆಗಲೇ ಎರಡೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ನಾನು ಈ ಪಾಪಿಗಳ ಜೊತೆ ಸೇರಿದ್ದು ರೈತರಿಗೆ ಸಹಾಯ ಮಾಡಲು ಮಾತ್ರ” ಎಂದು ಪ್ರತಿಪಾದಿಸಿದರು.
ನಾನು ೧೪ ತಿಂಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ತಪ್ಪಿಸಲು ಸಾಲ ಮನ್ನಾ ಮಾಡಿದ್ದೆ. ಈಗ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ೨೫೦೦ ರೂ.ನಲ್ಲಿ ಏನು ಮಾಡಲು ಸಾಧ್ಯ ನೀವು ಕಾಫಿ ತಿಂಡಿಗೆ ೨೦೦ ಕೋಟಿ ಖರ್ಚು ಮಾಡುತ್ತೀರಿ, ರೈತರಿಗೆ ೨೫೦೦ ಕೊಟ್ಟರೆ ಏನು ಮಾಡಲು ಸಾಧ್ಯ ಯಾವ ಭಾಗದಲ್ಲಿ ಎಷ್ಟು ನಷ್ಟವಾಗಿದೆ ಎಂದು ವೈಜ್ಞಾನಿಕವಾಗಿ ತೀರ್ಮಾನ ಮಾಡಿ ಪರಿಹಾರ ನೀಡಬೇಕು” ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸೂಚಿಸಿದರು.
ನಂದಿನಿ ಹಾಲು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು, ದರ ಏರಿಕೆ ಮಾಡಿ ಗ್ರಾಹಕರಿಗೆ ಬರೆ ಹಾಕುವುದು ಸರಿಯಲ್ಲ.ಅದರ ಬದಲು ಸರ್ಕಾರದಿಂದಲೇ ಹಾಲು ಉತ್ಪಾದಕರಿಗೆ ೫ ರೂ. ಪ್ರೋತ್ಸಾಹ ಧನ ನೀಡಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಸರ್ವಪಕ್ಷ ನಿಯೋಗ ದೆಹಲಿಗೆ: ಕುಮಾರಸ್ವಾಮಿ ವ್ಯಂಗ್ಯ :
ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ವಿಚಾರವಾಗಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.ಸರ್ವಪಕ್ಷ ನಿಯೋಗ ಹೋಗಿ ಏನು ಮಾಡುತ್ತೀರಿ ಅದೊಂದು ಖರ್ಚು. ವಿಮಾನ, ಫೈವ್ ಸ್ಟಾರ್ ಹೋಟೆಲ್ ಎಲ್ಲಾ ಖರ್ಚು. ನೀವೇ ಯಾರಾದರೂ ಹೋಗಿ ಮಾತಾಡಿಕೊಂಡು ಬರಲು ಆಗಲ್ವಾ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳುವುದಿಲ್ಲ, ಖಾಲಿ ಮಾಡಿಕೊಂಡು ಕುಳಿತಿರುವವರು ನೀವು ಎಂದು ತಿರುಗೇಟು ನೀಡಿದರು.

























