Home ಸುದ್ದಿ ರಾಷ್ಟ್ರೀಯ ದೇಶದ ಮೊದಲ ಎಲ್‍ಎನ್‍ಜಿ ಡ್ಯುಯಲ್-ಇಂಧನ ರೈಲಿಗೆ ಚಾಲನೆ

ದೇಶದ ಮೊದಲ ಎಲ್‍ಎನ್‍ಜಿ ಡ್ಯುಯಲ್-ಇಂಧನ ರೈಲಿಗೆ ಚಾಲನೆ

ಸಬರಮತಿ,ಸೆ.27-ರೈಲು ಸಾರಿಗೆಯನ್ನು ಹೆಚ್ಚು ಇಂಧನ-ಸಮರ್ಥ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಐತಿಹಾಸಿಕ ಹೆಜ್ಜೆಯಿಟ್ಟಿದೆ. ದೇಶದ ಮೊದಲ ಎಲ್‍ಎನ್‍ಜಿ-ಡೀಸೆಲ್ ಡ್ಯುಯಲ್-ಇಂಧನ ರೈಲು ಭಾನುವಾರದಿಂದ ಗುಜರಾತ್‍ನ ಸಬರಮತಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದು, ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಈ ನೂತನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.


ಸಬರಮತಿ ಇಂಟಿಗ್ರೇಟೆಡ್ ಕೋಚಿಂಗ್ ಡಿಪೆÇೀದಲ್ಲಿರುವ ಎರಡು 1,400-ಅಶ್ವಶಕ್ತಿಯ ಇಂಜಿನ್‍ಗಳನ್ನು ಎಲ್‍ಎನ್‍ಜಿ-ಡೀಸೆಲ್ ಡ್ಯುಯಲ್-ಇಂಧನ ವ್ಯವಸ್ಥೆಗೆ ಪರಿವರ್ತಿಸಲಾಗಿದ್ದು, ಎಂಟು ಬೋಗಿಗಳ ರೈಲನ್ನು ನಿರ್ವಹಿಸಲು ಇವುಗಳನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನದಿಂದಾಗಿ ಡೀಸೆಲ್ ಬಳಕೆಯಲ್ಲಿ ಸುಮಾರು ಶೇಕಡಾ 40 ರಷ್ಟು ಕಡಿತವಾಗಲಿದ್ದು, ಇಂಧನ ವೆಚ್ಚ ಮತ್ತು ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಹೊಸ ವ್ಯವಸ್ಥೆಯಿಂದ ಪ್ರತಿ ಎಂಜಿನ್‍ಗೆ ವಾರ್ಷಿಕ ಸುಮಾರು ?11.9 ಲಕ್ಷ ಉಳಿತಾಯವಾಗಲಿದ್ದು, ಎರಡು ಎಂಜಿನ್‍ಗಳಿಂದ ಒಟ್ಟು 23.9 ಲಕ್ಷಕ್ಕೂ ಹೆಚ್ಚು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.


ಸಾಂಪ್ರದಾಯಿಕ ಡೀಸೆಲ್ ಎಂಜಿನ್‍ನ ಸಾಮಥ್ರ್ಯವನ್ನು ಕಾಯ್ದುಕೊಂಡೇ ವಿನ್ಯಾಸಗೊಳಿಸಲಾದ ಈ ದ್ವಿ-ಇಂಧನ ವ್ಯವಸ್ಥೆಯು ಅಗತ್ಯಕ್ಕೆ ತಕ್ಕಂತೆ ಎಲ್‍ಎನ್‍ಜಿ ಮತ್ತು ಡೀಸೆಲ್ ನಡುವೆ ಬದಲಾಗುವ ಸೌಲಭ್ಯ ಹೊಂದಿದೆ. ಯಾವುದೇ ಸ್ಥಳದಲ್ಲಿ ಎಲ್‍ಎನ್‍ಜಿ ಲಭ್ಯವಿಲ್ಲದಿದ್ದರೂ ರೈಲು ಸಂಪೂರ್ಣವಾಗಿ ಡೀಸೆಲ್‍ನಲ್ಲೇ ಚಲಿಸಬಲ್ಲದು. ಈ ತಂತ್ರಜ್ಞಾನವನ್ನು ಈಗಾಗಲೇ ಸುಮಾರು 2,000 ಕಿಲೋಮೀಟರ್‍ಗಳವರೆಗೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇದೇ ಸಂದರ್ಭದಲ್ಲಿ ಸಬರಮತಿಯಲ್ಲಿ 1,542 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಅಮಿತ್ ಶಾ ಚಾಲನೆ ನೀಡಲಿದ್ದು, 700 ಕೋಟಿ ವೆಚ್ಚದ ಡಬ್ಲ್ಯೂಎಜಿ-12 ಎಂಜಿನ್ ನಿರ್ವಹಣಾ ಶೆಡ್ ಸಹ ಉದ್ಘಾಟನೆಗೊಳ್ಳಲಿದೆ.