Home ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ವಿಐಪಿ ಪಕ್ಷದ ಶಕ್ತಿ ಪ್ರದರ್ಶನ

ಕಲಬುರಗಿಯಲ್ಲಿ ವಿಐಪಿ ಪಕ್ಷದ ಶಕ್ತಿ ಪ್ರದರ್ಶನ

ಕಲಬುರಗಿ,ಮೇ.18-ಪಂಚ ರಾಜ್ಯ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷ ತನ್ನ ಅಸ್ತಿತ್ವ ಮೂಡಿಸಲು ಸಜ್ಜಾಗಿದ್ದು, ರಾಷ್ಟ್ರೀಯ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಕರ್ನಾಟಕದಲ್ಲಿ ಸಂಘಟನೆ ಬಲಪಡಿಸಲು ಮುಂದಾಗಿದೆ. ಕಲಬುರಗಿಯಲ್ಲಿ ವಿವಿಧ ಮಠಾಧೀಶರು ಹಾಗೂ ಹಿಂದುಳಿದ ಸಮುದಾಯಗಳ ಮುಖಂಡರು ಸಭೆ ನಡೆಸಿ ಪಕ್ಷಕ್ಕೆ ಬೆಂಬಲ ಸೂಚಿಸಿದರು.
ರಾಷ್ಟ್ರೀಯ ಕೋಲಿ, ಬೆಸ್ತ, ನಿಶಾದ್ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅನೇಕ ಮಠಾಧೀಶರು, ಸಮಾಜದ ಮುಖಂಡರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದರು. ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಅತಿಹಿಂದುಳಿದ ಸಮುದಾಯಗಳಿಗೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಐಪಿ ಪಕ್ಷ ಹಿಂದುಳಿದ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಐಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಕೆ. ಮೋಹನಕುಮಾರ್ ಮಾತನಾಡಿ, ಪಕ್ಷವು ರಾಷ್ಟ್ರೀಯ ಅಧ್ಯಕ್ಷ ಮುಖೇಶ್ ಸುಹಾನಿ ಅವರ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಜನಸಾಮಾನ್ಯರ ಪರ ಕೆಲಸ ಮಾಡುತ್ತಿದೆ. ಇದೀಗ ಕರ್ನಾಟಕದಲ್ಲಿಯೂ ಪಕ್ಷ ಸಂಘಟನೆಗೆ ಹೈಕಮಾಂಡ್ ವಿಶೇಷ ಆದ್ಯತೆ ನೀಡಿದ್ದು, ಹಿಂದುಳಿದ ಸಮುದಾಯಗಳ ಸಂಘಟನೆ ಮತ್ತು ರಾಜಕೀಯ ಶಕ್ತಿಕರಣವೇ ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೋಲಿ, ಬೆಸ್ತ, ನಿಶಾದ್ ಸೇರಿದಂತೆ ಅನೇಕ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಅವಕಾಶಗಳು ಕಡಿಮೆಯಾಗಿದ್ದು, ಅವರ ಹಕ್ಕು ಮತ್ತು ಪ್ರಾತಿನಿಧ್ಯಕ್ಕಾಗಿ ವಿಐಪಿ ಪಕ್ಷ ಹೋರಾಟ ನಡೆಸಲಿದೆ. ಪ್ರಾದೇಶಿಕ ಪಕ್ಷಗಳ ಅಗತ್ಯ ಇಂದು ಹೆಚ್ಚಾಗಿದ್ದು, ಅವಕಾಶ ವಂಚಿತ ಸಮುದಾಯಗಳ ಸೇವೆಗೆ ಪಕ್ಷ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ವಿಐಪಿ ನಾಯಕರು, ಕಲಬುರಗಿಯಲ್ಲಿ ಸಭೆ ನಡೆಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷ ಸಂಘಟನೆ ಬಲಪಡಿಸುವ ಗುರಿ ಹೊಂದಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗಲು ತಯಾರಿ ಆರಂಭಿಸಿದ್ದಾರೆ.
ಸಸಿಗೆ ನೀರು ಉಣಿಸುವ ಮೂಲಕ ವಿಐಪಿ ಪಕ್ಷದ ಸಭೆಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ ಕೆ ಮೋಹನ್ ಕುಮಾರ್ ಚಾಲನೆ ನೀಡಿದರು ಬ್ರಹ್ಮಶ್ರೀ ರಾಜು ಗುರು ಸ್ವಾಮಿ, ಸಂಗನಬಸವ ಮಹಾಸ್ವಾಮಿ,ಚಿದಾನಂದ ಮಹಾಸ್ವಾಮಿ,ರವಿಶಂಕರ್ ಮಹಾಸ್ವಾಮಿ, ಅಭಿನವ ಅಂಬಿಗರ ಚೌಡಯ್ಯ ಮೂಲಗದ್ದುಗೆ ಸ್ವಾಮಿ ಸೇರಿದಂತೆ ಜಿಲ್ಲೆಯ ಅನೇಕ ಹಿಂದುಳಿದ ಸಮುದಾಯದ ಸ್ವಾಮೀಜಿಗಳು ಬೆಂಬಲ ನೀಡಿದರು.